ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ
ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ
ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು.
ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ
ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ
ನೀಡಿದಾತನೇ ಭಕ್ತನೆಂದು
ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು.
ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ.
ಅದೆಂತೆಂದಡೆ:
ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ
ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ,
ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ
ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು
ಗುರುವಿಗೆ ತನುವ ನೀಡಬೇಕೆಂದು,
ಆ ಗುರುವಿನ ಸೇವಾವೃತ್ತಿಯಿಂದ
ತನುವ ದಂಡನೆಯ ಮಾಡುವರು.
ಅದೇನು ಕಾರಣವೆಂದಡೆ:
ಗುರುವಿನ ನಿಲುಕಡೆಯನರಿಯದ ಕಾರಣ.
ಲಿಂಗಕ್ಕೆ ಮನವ ನೀಡಬೇಕೆಂದು
ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ,
ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು
ಎವೆಗೆ ಎವೆ ಹೊಡೆಯದೆ ಸತ್ತ ಮೊಲದ ಕಣ್ಣಿನಂತೆ
ಕಣ್ಣು ತೆರೆದು ನೋಡಿದಡೆ
ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ?
ನಿಲ್ಲಲರಿಯದು.
ಅದೇನು ಕಾರಣವೆಂದಡೆ :
ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ
ತಾವೆಂದರಿಯದ ಕಾರಣ.
ಇಂತೀ ಪರಿಯಲ್ಲಿ ಮನವ ಬಳಲಿಸುವರು.
ಜಂಗಮಕ್ಕೆ ಧನವ ನೀಡಬೇಕೆಂದು
ಅನ್ನ-ವಸ್ತ್ರ ಮೊದಲಾದ ಹದಿನೆಂಟು
ಧಾನ್ಯ ಜೀನಸು ಸಹವಾಗಿ
ನಾನಾ ಧಾವತಿಯಿಂದ ಗಳಿಸಿ
ಸಕಲ ಪದಾರ್ಥವನು ಜಂಗಮಕ್ಕೆ ನೀಡಿ,
ಆತ್ಮನ ಬಳಲಿಸುವರು.
ಅದೇನು ಕಾರಣವೆಂದಡೆ,
ಆ ಜಂಗಮದ ನಿಜನಿಲುಕಡೆಯ ಸ್ವರೂಪ
ತಾವೆಂದರಿಯದ ಕಾರಣ.
ಇಂತಿವೆಲ್ಲವು ಹೊರಗಣ ಉಪಚಾರ.
ಈ ಹೊರಗಣ ಉಪಚಾರವ ಮಾಡಿದವರಿಗೆ
ಪುಣ್ಯಫಲಪ್ರಾಪ್ತಿ ದೊರಕೊಂಬುವದು.
ಆ ಪುಣ್ಯಫಲ ತೀರಿದ ಮೇಲೆ
ಮರಳಿ ಭವಬಂಧನವೇ ಪ್ರಾಪ್ತಿ.
ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ.
ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು.
ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು
ನೋಡೆಂದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.