Index   ವಚನ - 91    Search  
 
ಭಕ್ತಿಗೆ ತೋಲಾಗಿ ಓಡುವಾತ ಜಂಗಮವಲ್ಲ. ಮಂತ್ರ ತಂತ್ರ ವಶೀಕರಣ ಕಲಿತು ಮೆರೆದಾಡುವಾತ ಜಂಗಮವಲ್ಲ. ವೇಷದ ಗುಣವನರಿಯದ ಹಾಸ್ಯಗಾರನ ಹಾಗೆ ವಿಭೂತಿ ರುದ್ರಾಕ್ಷಿ ಕಾವಿಲಾಂಛನವ ಧರಿಸಿ ತಿರುಗುವರೆಲ್ಲ ಜಂಗಮರಲ್ಲ. ಬೇಟೆಯ ನಾಯಿಯಂತೆ ವಿಷಯದಾಶೆಗೆ ಮುಂದುವರೆದು ತಿರುಗುವಾತ ಜಂಗಮವಲ್ಲ. ಇವರು ಜಂಗಮವೆಂದಡೆ ನಗುವರಯ್ಯ ನಿಮ್ಮ ಶರಣರು. ಅದೇನು ಕಾರಣವೆಂದಡೆ: ಇಂತಿವರೆಲ್ಲರು ಪರಮಜಂಗಮದ ನಿಲುಕಡೆಯನರಿಯರಾಗಿ, ಮುಂದೆ ಭವಜಾಲದಲ್ಲಿ ರಾಟಾಳ ತಿರುಗಿದಂತೆ ತಿರುಗುವದೇ ಪ್ರಾಪ್ತಿ ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.