Index   ವಚನ - 95    Search  
 
ಶ್ರೀಗುರು ಬಂದು ತ್ರಿವಿಧದೀಕ್ಷೆಯಿಂದ ಉಪದೇಶವ ಮಾಡುವ ಕಾಲದಲ್ಲಿ ಹಸ್ತದಲ್ಲಿ ಶಸ್ತ್ರವ ಹಿಡಿದು ಕಡಿದುಕೊಂಡು ನುಂಗಿದಾತನೇ ಶಿಷ್ಯನೆಂಬೆ. ಲಿಂಗವು ಬಂದು ಹಸ್ತದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ವೇಳೆಯಲ್ಲಿ ವಜ್ರಾಯುಧದಿಂದ ಬಡಿದು ಒಡೆದು ಚೂರ್ಣವ ಮಾಡಿ ಉದಕದೊಳಗೆ ಹಾಕಿ ಕುಡಿಯುವವನೇ ಶರಣನೆಂಬೆ. ಜಂಗಮ ಬಂದು ಇದುರಿನಲ್ಲಿ ಕುಳಿತು ಅನುಭಾವಬೋಧೆಯನು ಮಾಡುವ ಸಮಯದಲ್ಲಿ ಹಸ್ತದಲ್ಲಿ ಖಡ್ಗವ ಪಿಡಿದು ಎಡಕ ಬಂದವನ ಕುಟ್ಟಿ, ಬಲಕ ಬಂದವನ ಹೆಟ್ಟಿ, ಎದುರಿನಲ್ಲಿ ಬಂದವನ ಮೆಟ್ಟಿ, ಆ ಜಂಗಮವನು ಕಡಿದು ಅವನ ಕಂಡವ ಚಿನಿಪಾಲವ ಮಾಡಿ, ನೀರಿಲ್ಲದೆ ಅಟ್ಟು, ಕಿಚ್ಚಿಲ್ಲದೆ ಸುಟ್ಟು, ಹಸ್ತವಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ಸಂತೋಷವಿಲ್ಲದೆ ಪರಿಣಾಮಿಸಬಲ್ಲರೆ ಭಕ್ತನೆಂಬೆ. ಇಂತೀ ತ್ರಿವಿಧದ ಅನುಭಾವವ ಹೇಳಬಲ್ಲರೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂಬೆ. ಲಿಂಗಾಂಗಿ ಎಂಬೆ, ಶಿವಜ್ಞಾನಸಂಪನ್ನರೆಂಬೆ, ಪರಶಿವಯೋಗಿಗಳೆಂಬೆ, ಚಿತ್ಪ್ರಕಾಶಜ್ಞಾನಿಗಳೆಂಬೆ, ಈ ವಚನದ ಭೇದವ ತಿಳಿಯದಿದ್ದರೆ ಸತ್ತಹಾಗೆ ಸುಮ್ಮನೆ ಇರು ಎಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.