Index   ವಚನ - 97    Search  
 
ಲಿಂಗಜಂಗಮ ಒಂದೆಂದರಿಯದೆ ಲಿಂಗಜಂಗಮವ ಭಿನ್ನವಿಟ್ಟು ಅರ್ಚಿಸುವರು. ಅದೆಂತೆಂದಡೆ: ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೆ? ಬೀಜ ವೃಕ್ಷಕ್ಕೆ ಭೇದವುಂಟೆ? ಜ್ಯೋತಿ ಪ್ರಭೆಗೆ ಭೇದ ಉಂಟೆ? ಹಾಗೆ ಲಿಂಗಜಂಗಮಕ್ಕೆ ಭೇದವಿಲ್ಲ. ಅದೇನು ಕಾರಣವೆಂದಡೆ: ಲಿಂಗವೇ ಅಂಗ, ಜಂಗಮವೇ ಪ್ರಾಣ. ಲಿಂಗವೇ ಬೀಜ, ಜಂಗಮವೇ ವೃಕ್ಷ. ಲಿಂಗವೇ ಜ್ಯೋತಿ, ಜಂಗಮವೇ ಪ್ರಕಾಶ. ಇಂತೀ ನಿರ್ಣಯವ ತಿಳಿದರೆ ಪ್ರಾಣಲಿಂಗಿ, ತಿಳಿಯದಿದ್ದರೆ ಜಡಲಿಂಗಿಗಳೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.