Index   ವಚನ - 110    Search  
 
ಇಂತಪ್ಪ ಭಿನ್ನ ಗುರುವಿನ ಕೈಯಿಂದ ಪಡಕೊಂಡ ಲಿಂಗವ ಮರಳಿ ಜ್ಞಾನಗುರುವಿನ ಕೈಯಲ್ಲಿ ಕೊಟ್ಟು ಲಿಂಗವ ಪಡಿಯಲುಬೇಕು. ಇದಕ್ಕೆ ಸಂಶಯ ಮಾಡುವಿರಿ; ಸಂಶಯ ಮಾಡಲಾಗದು. ಅದು ಅಜ್ಞಾನದೊಳಗು. ಅದೆಂತೆಂದೊಡೆ, ಇದಕ್ಕೆ ದೃಷ್ಟಾಂತ : ಲೌಕಿಕದಲ್ಲಿ ಪಂಚಾಳಕುಲದಲ್ಲಿ ಒಬ್ಬ ಪತ್ತಾರನಿಗೆ ಒಂದು ಸನಗು ಮಾಡಿಕೊಡೆಂದು ಕೊಟ್ಟರೆ, ಅವರು ಮಾಡಿಕೊಟ್ಟ ಸನಗು ತಮಗೆ ಪರಿಣಾಮ ತಟ್ಟಿದಡೆ ಇಟ್ಟುಕೊಂಬುವರು. ಪರಿಣಾಮವಿಲ್ಲದಾದರೆ ಮರಳಿ ಮತ್ತೊಬ್ಬ ಜಾಣಪತ್ತಾರನ ಕೈಯಿಂದ ಮಾಡಿಸಿ ಇಟ್ಟುಕೊಂಬುವರು. ಮತ್ತಂ, ಒಬ್ಬ ಬಡಿಗನಿಂದ ಆವುದಾನೊಂದು ಗಳೆಯ ಹಾಸಿಕೊಂಡೊಯಿದು ಹೋಗಿ ಭೂಮಿಯಲ್ಲಿ ಹೂಡಿ ಹೊಡೆದರೆ ನೀಟವಾಗಿ ನಡೆದರೆ ಹೂಡುವರು. ನೀಟವಾಗಿ ನಡೆಯದಿದ್ದರೆ ಮರಳಿ ಮತ್ತೊಬ್ಬ ಬಡಗಿಯನ ಕರದೊಯ್ದು ನೀಟವಾಗಿ ಗಳೆಯ ಹಾಯಿಸಿ ಹೂಡುವುರಲ್ಲದೆ ಹಾಗೇ ಹೊಡೆಯರು. ಒಬ್ಬ ಸಿಂಪಿಗನಲ್ಲಿ ಆವುದಾನೊಂದು ಉಡಿಗೆತೊಡಿಗೆ ಹೊಲಿಸಿಕೊಂಡು ಉಟ್ಟುತೊಟ್ಟರೆ ತಮ್ಮಂಗಕ್ಕೆ ಹಿತವಪ್ಪಿದರೆ ಇಟ್ಟುಕೊಂಬುವರು. ಇಲ್ಲವಾದರೆ ಮರಳಿ ಮತ್ತೊಬ್ಬ ಜಾಣ ಸಿಂಪಿಗನಲ್ಲಿ ಹೊಲಿಸಿಕೊಂಡು ತೊಡುವರಲ್ಲದೆ, ಹಾಗೇ ತೊಡರು. ಇಂತೀ ತ್ರಿವಿಧವು ಮೊದಲೇ ಇದ್ದ ಹಾಗೆ ಆಚರಿಸಿದಡೆ, ಅವರಂಗಕ್ಕೆ ದಣುವಲ್ಲದೆ ಹಿತಕರವಾಗಿ ತೋರದೆಂಬ ಹಾಗೆ, ಅಂತಪ್ಪ ಭಿನ್ನಭಾವದ ಶೈವಗುರುವಿನ ಉಪದೇಶವ ವಿಸರ್ಜಿಸಿ, ಅಭಿನ್ನಭಾವವೆಂಬ ಸ್ವಾನುಭಾವಜ್ಞಾನಗುರುಮುಖದಿಂ ತಾರಕಮಂತ್ರೋಪದೇಶವ ಪಡೆದು, ಲಿಂಗಧಾರಣವಾದಡೆಯು ವೀರಶೈವರ ಅಚ್ಚು, ಪುರಾತನರ ಮಚ್ಚು, ಸರ್ವಗಣಂಗಳಿಗೆ ಸಮ್ಮತ. ಇಂತಪ್ಪ ವಿಚಾರವನರಿಯದೆ ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಕೊಟ್ಟು ಪೂಜಿಸು ಎಂದು ಹೇಳುವ ಗುರುವು, ಆ ಕಲ್ಲಲಿಂಗವ ಕೈಯಲ್ಲಿ ಪಿಡಿದು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜಿಸುವ ಶಿಷ್ಯನು, ಬಳಿಗುರುಡನ ಕೈ ಬಳಿಗುರುಡ ಪಿಡಿದು, ಕಾಣದೆ ಡೊಂಗುರವ ಬಿದ್ದಂತೆ ಗುರುಶಿಷ್ಯರೆಂಬುಭಯರು ಯಮಗೊಂಡದಲ್ಲಿ ಬೀಳುವರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.