Index   ವಚನ - 112    Search  
 
ಜಂಗಮರ ಕಂಡರೆ ಜರಿವರು, ಜೋಗಿ ಸನ್ಯಾಸಿಯ ಕಂಡರೆ ನಮಿಸುವರು. ಲಿಂಗವ ಕಂಡರೆ ಹಿಂಗುವರು, ಗಾಂಜಿ ಭಂಗಿಯುಳ್ಳವರ ಕಂಡರೆ ಬಗ್ಗುವರು. ಹರಪೂಜೆಯೆಂದರೆ ಜರಿಯುವರು, ನರಪೂಜೆಯೆಂದರೆ ಉಬ್ಬುವರು, ಗುರು ಕೊಟ್ಟ ಲಿಂಗವ ನಂಬರು; ವಿಪ್ರ ಮೊದಲು ಶ್ವಪಚರ ಕಡೆಯಾಗಿ ನೂರೊಂದು ಕುಲದವರು ಕೂಡಿ ನೆರೆದು ಒಂದು ಕಾಡಗಲ್ಲ ತಂದು ಲಿಂಗವೆಂದು ನಡಸಿದ ಲಿಂಗಕ್ಕೆ ಒಂದೊತ್ತು ಉಪವಾಸ ಮಾಡಿ ನೇಮನಿತ್ಯದಿಂದ ನಡೆವವರು ಶರಣರೆಂದೊಡೆ ನಿಮ್ಮ ಪ್ರಮಥರು ನಗುವರಯ್ಯಾ. ಶಿವನು ಒಲಿ ಒಲಿ ಎಂದಡೆ ಇಂತಪ್ಪ ವ್ರತಭ್ರಷ್ಟ ಸೂಳೆಯ ಮಕ್ಕಳಿಗೆ ಎಂತೊಲಿವನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.