Index   ವಚನ - 139    Search  
 
ಮುಷ್ಟಿಯ ಚಡಾಯಿಸಿ ಮಾನವರ ಕೊಲ್ಲುವಾತ ಮಹೇಶ್ವರನಲ್ಲ. ಯಂತ್ರವ ಬರೆದು ಕಟ್ಟಿ ಭೂತವ ಬಿಡಿಸುವಾತ ಮಹೇಶ್ವರನಲ್ಲ. ವೈದ್ಯಗಳ ಮಾಡಿ ರೋಗಾದಿಗಳ ಪರಿಹರಿಸುವಾತ ಮಹೇಶ್ವರನಲ್ಲ. ಅದೇನು ಕಾರಣವೆಂದಡೆ : ಕಾಲ-ಕಾಮ-ಮಾಯಾದಿಗಳು ಸಂಕಲ್ಪ ವಿಕಲ್ಪವೆಂಬ ಮುಷ್ಟಿಯ ತಮ್ಮಂಗಕ್ಕೆ ಚಡಾಯಿಸಿ ಕೊಲ್ಲುವದನರಿಯದೆ, ಪರರಿಗೆ ಮುಷ್ಟಿಯ ಮಾಡುವರು. ಮತ್ತಂ, ಮಾಯೆಯೆಂಬ ಭೂತ, ಹೊನ್ನು ಹೆಣ್ಣು ಮಣ್ಣೆಂಬ ಯಂತ್ರವ ನಿಮ್ಮ ಮನದಲ್ಲಿ ನಿಲುಕಿಸಿ ಬಂಧಿಸಿ ಭವಭವದಲ್ಲಿ ಗಾಸಿಯಾಗುವದನರಿಯದೆ ಪರರಿಗೆ ಯಂತ್ರವ ಕಟ್ಟುವರು. ಮತ್ತಂ, ಆಶೆ-ರೋಷ-ಹರುಷವೆಂಬ ರೋಗಾದಿಗಳು ತಮ್ಮಾತ್ಮಂಗೆ ಪ್ರವೇಶವಾಗಿ ಯುಗಯುಗಾಂತರದಲ್ಲಿ ಶ್ರಮಬಡುವುದನರಿಯದೆ ಪರರಿಗೆ ವೈದ್ಯವ ಮಾಡುವರು, ಇವರು ಮಹೇಶ್ವರರಲ್ಲ ; ಭವಭಾರಿಗಳು. ಅದೆಂತೆಂದೊಡೆ-ಲಿಂಗವಿಲ್ಲದ ಕಾರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.