Index   ವಚನ - 180    Search  
 
ಅರಗಿನ ಭೂಮಿ ಅಗ್ನಿಕುಂಡದ ಉದಕದಲ್ಲಿ ಬೇರಿಲ್ಲದ ವೃಕ್ಷಪುಟ್ಟಿ, ಶಾಖೆಯಿಲ್ಲದೆ ಪಲ್ಲವಿಸಿ, ತಳಿರಿಲ್ಲದೆ ಕೊನರಾಗಿ, ಮೊಗ್ಗೆಯಿಲ್ಲದೆ ಹೂವಾಗಿ, ಹೂವಿಲ್ಲದೆ ಕಾಯಾಗಿ, ಕಾಯಿಲ್ಲದೆ ಹಣ್ಣಾಗಿ, ಹಣ್ಣಿಲ್ಲದೆ ರಸತುಂಬಿ ತೊಟ್ಟು ಬಿಟ್ಟಿತ್ತು. ಆ ಹಣ್ಣಿಗೆ ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ತೃಪ್ತಿಯಿಲ್ಲದೆ ಪರಿಣಾಮಿಸಿ, ಸಂತೋಷವಿಲ್ಲದೆ ನಿಶ್ಚಿಂತನಾದ ಈ ಭೇದವ ಬಲ್ಲರೆ ಘನಲಿಂಗಿಯಾಗಿ ನಿಜಲಿಂಗೈಕ್ಯ ಅನಾದಿ ಶರಣನೆಂದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.