Index   ವಚನ - 187    Search  
 
ಪ್ರಾಸದವೆಂಬುದು ಪುಣ್ಯಪಾಪವೆಂಬುಭಯ ಕರ್ಮವ ಸಂಹರಿಸುವುದು. ಪ್ರಸಾದವೆಂಬುದು ಉತ್ಪತ್ತಿ, ಸ್ಥಿತಿ, ಲಯಂಗಳ ಸಂಹರಿಸುವುದು. ಪ್ರಸಾದವೆಂಬುದು ಭವಗಜಕ್ಕೆ ಅಂಕುಶವಾಗಿರ್ಪುದು. ಪ್ರಸಾದವೆಂಬುದು ಪರತರಮುಕ್ತಿಗೆ ಹಡಗಾಗಿರ್ಪುದು. ಪ್ರಸಾದವೆಂಬುದು ಎನ್ನ ಮರಿಸಿ ನಿನ್ನರುಹುತೋರುವುದು. ಪ್ರಸಾದವೆಂಬುದು ಮಾತಾ-ಪಿತ ಸತಿ-ಸುತರ ಬಂಧುಗಳ ಮೊದಲಾದ ಸಕಲಜನಂಗಳ ಹಂಗುದೊರೆಸಿ ನಿನ್ನ ಗುರುಲಿಂಗಜಂಗಮದ ಹಂಗಿನಲ್ಲಿರಿಸುವುದು. ಪ್ರಸಾದವೆಂಬುದು ಪರಮಜ್ಞಾನಿಗಳಾದ ಶಿವಶರಣರಿಗೆ ಅಮೃತಮಯವಾಗಿ ತೋರುವುದು. ಪ್ರಸಾದವೆಂಬುದು ಭಿನ್ನಜ್ಞಾನಿಗಳಾದ ಜೀವಾತ್ಮರಿಗೆ ಮಹಾಕಠಿಣವಾಗಿ ತೋರುವುದು. ಇಂತಪ್ಪ ಶಿವಪ್ರಸಾದದ ಘನವನರಿಯದೆ ನುಚ್ಚು ರೊಟ್ಟಿ ಪ್ರಸಾದವೆಂದು ಪಡಕೊಂಡು, ಲಿಂಗಕ್ಕೆ ತೋರಿ, ತಮ್ಮಂಗಕ್ಕೆ ಹೊಂದಿದಲ್ಲಿ ದುರ್ಗಂಧವಾಗಿ, ಮಲಮೂತ್ರ ವಿಸರ್ಜಿಸುವ ಮಂಗಮೂಳ ಹೊಲೆಯರಿಗೆ ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಪ್ರಸಾದಪ್ರಮಥರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.