ಶಿವ ಶಿವಾ, ನಾವು ಗುರುಲಿಂಗಜಂಗಮದ
ಅಚ್ಚಪ್ರಸಾದಿಗಳು ನಿಚ್ಚಪ್ರಸಾದಿಗಳು ಏಕಪ್ರಸಾದಿಗಳೆಂದು
ಸಮಯಪ್ರಸಾದಿಗಳು ನುಡಿದುಕೊಂಬುವ,
ಮತಿಭ್ರಷ್ಟ ಮರುಳಮಾನವರ ನಾನೇನೆಂಬೆನಯ್ಯಾ?
ಅದೇನು ಕಾರಣವೆಂದಡೆ :
ಪಾತಾಳಾದಿ ಸ್ವರ್ಗಾಂತ್ಯಮಾದ ತ್ರೈಭುವನಂಗಳು
ಉತ್ಪತ್ಯವಾಗುವುದಕ್ಕಿಂತ ಮುನ್ನವೆ,
ನಾನಾರು, ನಾನೆಲ್ಲಿದ್ದೆನೆಂದು ತನ್ನ ತಾನರಿದು
ನಿಲ್ಲಬಲ್ಲಾತನಿಗೆ ಗುರುವುಂಟು,
ಅದಲ್ಲದೆ ಅತಳ, ವಿತಳ, ಸುತಳ, ಮಹಾತಳ,
ರಸಾತಳ, ತಳಾತಳ, ಪಾತಾಳವೆಂಬ ಕೆಳಗೇಳುಲೋಕ.
ಮತ್ತಂ, ಭೂಲೋಕ, ಭುವರ್ಲೋಕ,
ಸುವರ್ಲೋಕ, ಜನರ್ಲೋಕ,
ತಪರ್ಲೋಕ, ಸತ್ಯಲೋಕ,
ಮಹಾಲೋಕವೆಂಬ ಮೇಲೇಳುಲೋಕ.
ಇಂತೀ ಈರೇಳುಲೋಕವು
ಜಲಪ್ರಳಯವಾಗಿ ಮುಳುಗ್ಯಾಡಲು
ರುದ್ರಲೋಕೊಂದು ಉಳಿಯಿತ್ತು.
ಆ ರುದ್ರಲೋಕವು, ಅತಂಪ್ಪ ರುದ್ರಲೋಕದಲ್ಲಿರುವ
ಸನಕ ಸನಂದಾದಿ ಮುನಿಜನಂಗಳೆಲ್ಲರು,
ಅದಲ್ಲದೆ, ಬ್ರಹ್ಮಾದಿ ಸದಾಶಿವಾಂತ್ಯಮಾದ ದೇವ ದಾನವರು
ಮೊದಲಾದ ತೆತ್ತೀಸಕೋಟಿ ದೇವರ್ಕಳು,
ಆ ರುದ್ರನು ಇಂತಿವರೆಲ್ಲರು
ಉತ್ಪತ್ಯವಾಗದಕ್ಕಿನ್ನ ಮುನ್ನವೆ,
ನಾನಾರು, ನಾನೆಲ್ಲಿದ್ದೆ, ನನ್ನ ಹೆಸರೇನು,
ನಾನಾವ ಕುಲದವನು ನಾನೆಲ್ಲಿಂದ ಹುಟ್ಟಿಬಂದೆ ?
ಆವಾಗ ಎನಗೆ ತಂದಿ-ತಾಯಿಗಳಾರು ?
ಆ ತಾಯಿ-ತಂದೆಗಳ ಹೆಸರೇನು ?
ಎಂದು ವಿಚಾರಿಸಿ,
ತನ್ನ ತಾನರಿದು ನಿಲ್ಲಬಲ್ಲಡೆ,
ಆತನಿಗೆ ಲಿಂಗವುಂಟು ಜಂಗಮವುಂಟು
ತೀರ್ಥಪ್ರಸಾದಿ ಎಂದೆನ್ನಬಹುದಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Śiva śivā, nāvu guruliṅgajaṅgamada
accaprasādigaḷu niccaprasādigaḷu ēkaprasādigaḷendu
samayaprasādigaḷu nuḍidukombuva,
matibhraṣṭa maruḷamānavara nānēnembenayyā?
Adēnu kāraṇavendaḍe:
Pātāḷādi svargāntyamāda traibhuvanaṅgaḷu
utpatyavāguvudakkinta munnave,
nānāru, nānelliddenendu tanna tānaridu
nillaballātanige guruvuṇṭu,
adallade ataḷa, vitaḷa, sutaḷa, mahātaḷa,
rasātaḷa, taḷātaḷa, pātāḷavemba keḷagēḷulōka.
Mattaṁ, bhūlōka, bhuvarlōka,
suvarlōka, janarlōka,
taparlōka, satyalōka,
mahālōkavemba mēlēḷulōka.
Intī īrēḷulōkavu
jalapraḷayavāgi muḷugyāḍalu
rudralōkondu uḷiyittu.
Ā rudralōkavu, atamppa rudralōkadalliruva
sanaka sanandādi munijanaṅgaḷellaru,
adallade, brahmādi sadāśivāntyamāda dēva dānavaru
modalāda tettīsakōṭi dēvarkaḷu,
ā rudranu intivarellaru
utpatyavāgadakkinna munnave,
nānāru, nānellidde, nanna hesarēnu,
nānāva kuladavanu nānellinda huṭṭibande?
Āvāga enage tandi-tāyigaḷāru?
Ā tāyi-tandegaḷa hesarēnu?
Endu vicārisi,
tanna tānaridu nillaballaḍe,
ātanige liṅgavuṇṭu jaṅgamavuṇṭu
tīrthaprasādi endennabahudayyā
kāḍanoḷagāda śaṅkarapriya cannakadambaliṅga
nirmāyaprabhuve.