Index   ವಚನ - 199    Search  
 
ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ ತನುವ ದಂಡಿಸಲಾಗದು. ಲಿಂಗಪ್ರೇಮಿಗಳಾದಡೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಮನವ ಬಳಲಿಸಲಾಗದು. ಜಂಗಮಪ್ರೇಮಿಗಳಾದಡೆ ಅನ್ನ ವಸ್ತ್ರ ಹದಿನೆಂಟು ಜೀನಸಿನ ಧಾನ್ಯ ಮೊದಲಾದ ಷೋಡಶಭಕ್ತಿಯಿಂದ ಆತ್ಮನ ಬಳಲಿಸಲಾಗದು. ಇಂತಪ್ಪ ಭಕ್ತರಿಗೆ ಭವ ಹಿಂಗದು ; ಮುಕ್ತಿಯು ತೋರದು. ಅದೇನು ಕಾರಣವೆಂದಡ : ತಮ್ಮ ನಿಜವ ಮರೆದು ಕರ್ಮಕಾಂಡಿಗಳಾದ ಕಾರಣ. ಇಂತಪ್ಪವರ ಭಿನ್ನಕ್ರಿಯಾಚಾರವನು ಸುಜ್ಞಾನೋದಯವಾದ ಜ್ಞಾನಕಲಾತ್ಮನು ತನ್ನ ಪರಮಜ್ಞಾನದಿಂ ನಷ್ಟವ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಂಬಂಧಿಯಾಗಿ, ಸರ್ವಾಂಗಲಿಂಗಮಯ ತಾನೆಂದು ತಿಳಿದು, ವಿಚಾರಿಸಿಕೊಂಡು ಪರಶಿವಪರಮೂರ್ತಿಗಳಾದ ಗುರುಲಿಂಗಜಂಗಮವನ್ನು ತನ್ನ ತನುಮನದಲ್ಲಿ ಸ್ವಾಯತವಮಾಡಿದ ಶಿವಶರಣಂಗೆ ಭವ ಹಿಂಗಿ, ಮುಕ್ತಿ ಎಂಬುದು ಕರತಳಾಮಳಕವಾಗಿ ತೋರುವದು ಕಾಣೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.