Index   ವಚನ - 207    Search  
 
ದಿನಚರಿ ಮಾಸದೊಳಗೆ ಏಳು ವಾರದೊಳಗೆ ಸೋಮವಾರ ಉಪವಾಸ ಮಾಡಬೇಕೆಂಬಿರಿ. ದ್ವಾದಶಮಾಸದೊಳಗೆ ಶ್ರಾವಣಸೋಮವಾರ ಉಪವಾಸಮಾಡಬೇಕೆಂಬಿರಿ. ಮಾಘಮಾಸದ ಚತುರ್ದಶಿ ಉಪವಾಸ ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂಬಿರಿ. ಇಂತೀ ವಾರ, ಮಾಸ, ತಿಥಿಯಲ್ಲಿ ಅನ್ನ ಉದಕವ ತೊರೆದು, ಉಪವಾಸ ಮಾಡಿ, ಆತ್ಮವ ಬಳಲಿಸಿ, ತನುವನೊಣಗಿಸಿ, ನೀವು ವ್ರತವನಾಚರಿಸಿದಡೆ ನಿಮ್ಮ ಆತ್ಮದ್ರೋಹವು ಆ ದೇವತೆಗಳಿಗೆ ತಾಕಿ ಭವಭವದಲ್ಲಿ ಬೀಳುವರು. ಇದು ಕಾರಣವಾಗಿ ಉಪವಾಸ ಮಾಡಲಾಗದು. ಉಪವಾಸ ಮಾಡಿದಲ್ಲಿ ಪ್ರಯೋಜನವಿಲ್ಲ. ಅದೆಂತೆಂದಡೆ : ಉಂಡುಟ್ಟು ಲಿಂಗವ ಪೂಜಿಸಬೇಕು. ಉಣಿಸಿ ಉಡಿಸಿ ಜಂಗಮವನರ್ಚಿಸಬೇಕು. ಕೊಟ್ಟು ಕೊಂಡು ಗುರುವನರ್ಚಿಸಬೇಕು. ಇಂತೀ ತ್ರಿವಿಧದ ಭೇದ ಬಲ್ಲರೆ ಉಪವಾಸವ ಮಾಡಬಲ್ಲರೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.