Index   ವಚನ - 251    Search  
 
ಸಾಣಿಯ ಮೇಲೆ ಶ್ರೀಗಂಧವನಿಟ್ಟು, ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ಜಡಚಕ್ರದೊಳಗೆ ಧಾನ್ಯವ ನೀಡಿ ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ? ಗಾಣಕ್ಕೆ ಎಳ್ಳು ನೀಡಿ, ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ ಹೊಟ್ಟೆ ತುಂಬಿ ಹಸುವಡಗಬಲ್ಲುದ ಹಾಗೆ ಜಡರೂಪವಾದ ಲಿಂಗವ ಜಡಮತಿಗಳಾದ ಗುರುಮುಖದಿಂ ಪಡಕೊಂಡು ಅಂಗದ ಮೇಲೆ ಇಷ್ಟಲಿಂಗವೆಂದು ಧರಿಸಿ ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ, ಆ ಲಿಂಗವು ಮುಕ್ತಿಯ ಕೊಡಲರಿಯದು. ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು 'ಮರ್ದನಂ ಗುಣವರ್ಧನಂ' ಎಂದುದಾಗಿ, ಇಂತೀ ಎಲ್ಲವು ಮರ್ದನವಿಲ್ಲದೆ ಸ್ವಧರ್ಮಗುಣ ತೋರಲರಿಯವು. ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು, ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ ವಿಶ್ವಾಸ ಬಲಿದು ತುಂಬಿ ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂಧಿಯಾಗಿ ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು, ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.