Index   ವಚನ - 274    Search  
 
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.