ಕಪ್ಪಿನ ಭೂಮಿಗೆ ಮೂರುಗಜ ಸೂರ್ಯಕಾಂತದ ಕಲ್ಲು ಹಾಕಿ,
ಮೂರು ಹಣವ ಕೊಂಡೆ.
ಕೆಂಪಿನ ಭೂಮಿಗೆ ಆರು ಐದು ಗಜ ಚಂದ್ರಕಾಂತದ ಕಲ್ಲು ಹಾಕಿ,
ಆರೈದು ಹಣವ ಕೊಂಡೆ.
ಬಿಳುಪಿನ ಭೂಮಿಗೆ ಎರಡೆಂಟು ಏಳುಗಜದ
ಅಗ್ನಿಕಾಂತದ ಕಲ್ಲು ಹಾಕಿ,
ಎರಡೆಂಟು ಏಳು ಹಣವ ಕೊಂಡೆ.
ಉಳಿದ ವರ್ಣದ ಭೂಮಿಗೆ ಮೂವತ್ತಾರು ಗಜ ಹಲವು ವರ್ಣದ
ಚಿಪ್ಪುಗಲ್ಲುಗಳ ತುಂಬಿ ಈರೈದು ಹಣವ ಕೊಂಡೆ.
ಹೀಗೆ ಕಲ್ಲುಮಾರಿ ಹಾಗದ ಹಣವ ಕೊಂಡು
ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.