Index   ವಚನ - 301    Search  
 
ಶೀಲಮಾಡುವಣ್ಣಗಳ ಶುಚಿ ಅವಶುಚಿಯೆಂಬ ಅಂಕುಶದಿಂದಳಿಕಿಸಿ ಕಾಡಿತ್ತು ಮಾಯೆ. ಕ್ರೀಯ ಮಾಡುವಣ್ಣಗಳ ಕರ್ಮಕ್ಕೆ ಒಳಗು ಮಾಡಿ ಕಾಡಿತ್ತು ಮಾಯೆ. ವ್ರತಮಾಡುವಣ್ಣಗಳ ವ್ರತಭ್ರಷ್ಟರ ಮಾಡಿ ಕಾಡಿತ್ತು ಮಾಯೆ. ನೇಮ ಮಾಡುವಣ್ಣಗಳ ನೇಮವೆಂಬ ಸಂಕಲ್ಪಶೂಲದಲ್ಲಿ ನೀರಿಲ್ಲದ ವೃಕ್ಷದಂತೆ ಒಣಗಿಸಿ ಕಾಡಿತ್ತು ಮಾಯೆ. ದಾಸೋಹಮಾಡುವಣ್ಣಗಳ ದೇಶದೇಶಕ್ಕೆ ಯಾಚಕನಮಾಡಿ ತಿರುಗಿಸಿ ಕಂಡಕಂಡವರಿಗೆ ಬಾಯಿತೆರಿಸಿ ಕಾಡಿ ಬೇಡಿಸಿ ಕಾಡಿತ್ತು ಮಾಯೆ. ಭಕ್ತಿಮಾಡುವಣ್ಣಗಳ ಹೊನ್ನು ವಸ್ತ್ರ ಹದಿನೆಂಟುಜೀನಸು ಧಾನ್ಯ ಮೊದಲಾದ ಭತ್ತದ್ರವ್ಯವ ಹಾಳುಮಾಡಿ, ಲೋಕದ ಜನರ ಮುಂದೆ ನಗೆ ಹಾಸ್ಯ ಅವಮಾನದಿಂ ಕಾಡಿತ್ತು ಮಾಯೆ. ಧರ್ಮಮಾಡುವಣ್ಣಗಳ ಯುಕ್ತಿ ಮುಂದುದೋರಿ ಕರ್ಮಕ್ಕೆ ಬೆಳಗುಮಾಡಿ ಕಾಡಿತ್ತು ಮಾಯೆ. ವೇದಾಗಮಶಾಸ್ತ್ರಪುರಾಣವನೋದಿ ಹಾಡಿ ಹೇಳುವಣ್ಣಗಳ ಅಂತಪ್ಪ ಪುಣ್ಯಕಥೆ ಕಾವ್ಯವನೋದಿಸಿ ಲಾಲಿಸಿ ಏಕಚಿತ್ತರಾಗಿ ಕೇಳುವಣ್ಣಗಳ ಬಾಲೆಯರ ತೋಳು ತೊಡೆಯಲ್ಲಿ ಒರಗಿಸಿ ಕಾಡಿತ್ತು ಮಾಯೆ. ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ. ಸದಾಚಾರಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ: ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿಯ ಮಾಡಿ ಶ್ರೀಗುರುಕಾರುಣ್ಯದಿಂ ತ್ರಿವಿಧ ಷಡ್ವಿಧಾಂಗ ಮೊದಲಾದ ಸರ್ವಾಂಗದಲ್ಲಿ ಘನಮಹಾ ಇಷ್ಟಬ್ರಹ್ಮವನು ತ್ರಿವಿಧ ಷಡ್ವಿಧಲಿಂಗ ಮೊದಲಾಗಿ ಅನೇಕ ಲಿಂಗಸ್ವರೂಪಿನಿಂ ಸ್ವಾಯತವ ಮಾಡಿ, ಅಚ್ಚೊತ್ತಿದ ಅರಿವಿಯಂತೆ, ಕಚ್ಚಾದ ಗಾಯದಂತೆ, ಬೆಚ್ಚ ಬಂಗಾರದಂತೆ, ಅಂಗಲಿಂಗಕ್ಕೆ ಭಿನ್ನವಿಲ್ಲದೆ ಅವಿರಳ ಸಮರಸದಿಂ ಏಕಲಿಂಗನಿಷ್ಠಾಪಾರಿಗಳಾದ ವೀರಮಹೇಶ್ವರರೇ ಸದಾಚಾರ ಸದ್ಭಕ್ತಶರಣಜನಂಗಳು. ಇಂತಿವರು ಮೊದಲಾದ ಶಿವಜ್ಞಾನಿಗಳಾದ ಜ್ಞಾನಕಲಾತ್ಮರು ಮಾಯಾಕೋಲಾಹಲರಲ್ಲದೆ, ಇಂತಪ್ಪ ಶಿವಾಚಾರ ಧರ್ಮವನು ತಿಳಿಯದೆ ನೇಮದಿಂದಾಚರಿಸಿ ಇಷ್ಟ ಶೀಲ ವ್ರತ ಕ್ರಿಯಾ ದಾನಧರ್ಮವ ಮಾಡಿದರೇನು ವ್ಯರ್ಥವಲ್ಲದೆ ಸಾರ್ಥಕವಲ್ಲ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.