Index   ವಚನ - 305    Search  
 
ಲಿಂಗಪೂಜೆಯುಳ್ಳನ್ನಕ್ಕ ಲಿಂಗವಿಲ್ಲ. ಲಿಂಗದ ನೆನವು ಉಳ್ಳನ್ನಕ್ಕ ಲಿಂಗವಿಲ್ಲ. ಲಿಂಗವ ಕೂಡಬೇಕು, ಲಿಂಗವನರಿಯಬೇಕೆಂಬನ್ನಕ್ಕ ಲಿಂಗವಿಲ್ಲ. ಲಿಂಗವನರಿಯದಿರ್ದು, ಲಿಂಗವನರಿದು, ಲಿಂಗದಲ್ಲಿ ಬೆರೆದು, ಸುಖಿಯಾದೆನೆಂಬನ್ನಕ್ಕ ಲಿಂಗವಿಲ್ಲ. ನಾ ನನ್ನ ನಿಜವನರಿದು ಪರಿಣಾಮಿಯಾದೆನೆಂಬನ್ನಕ್ಕ ಲಿಂಗವಿಲ್ಲ. ಲಿಂಗೈಕ್ಯನಾದೆನೆಂದು ಪರರ ಮುಂದೆ ಬೀರುವನ್ನಕ್ಕ ಎಂದೆಂದಿಗೂ ಮುನ್ನವೆ ಲಿಂಗವಿಲ್ಲ. ಮತ್ತಂ, ಲಿಂಗವನರಿಯಬೇಕು, ಲಿಂಗವ ಕೊಡಬೇಕು, ಭವಬಂಧವ ಕಡಿಯಬೇಕೆಂದು ದೇಶದೇಶವ ತಿರುಗಿದರಿಲ್ಲ. ಊರಬಿಟ್ಟು ಅರಣ್ಯವ ಸೇರಿದರಿಲ್ಲ, ಹೊನ್ನು ಹೆಣ್ಣು ಮಣ್ಣು ಮೊದಲಾದ ಮನೆಮಾರು ತೊರೆದು ಸನ್ಯಾಸಿಯಾಗಿ ವೈರಾಗ್ಯತೊಟ್ಟು ವನವಾಸಗೈದರಿಲ್ಲ. ಅಶನ ವ್ಯಸನವ ಬಿಟ್ಟು, ಹಸಿವು ತೃಷೆಗಳ ತೊರೆದು, ಪರ್ಣಾಹಾರ ಕಂದಮೂಲ ತಿಂದು, ತನುಮನಧನವನೊಣಗಿಸಿದರಿಲ್ಲ. ಮಾತನಾಡಿದರಿಲ್ಲ, ಮಾತುಬಿಟ್ಟು ಮೌನದಿಂದಿದ್ದರೂ ಇಲ್ಲ. ಕ್ರೀಯ ಬಿಟ್ಟರಿಲ್ಲ, ಕ್ರೀಯ ಮಾಡಿದರಿಲ್ಲ. ಏನು ಮಾಡಿದರೇನು ವ್ಯರ್ಥವಲ್ಲದೆ ಸ್ವಾರ್ಥವಲ್ಲ. ಅದೇನುಕಾರಣವೆಂದರೆ, ತಮ್ಮ ನಿಲವು ತಾವು ಅರಿಯದ ಕಾರಣ. ನಮ್ಮ ಗುಹೇಶ್ವರಲಿಂಗವ ಬೆರೆಸಬೇಕಾದರೆ ಸಕಲಸಂಶಯ ಬಿಟ್ಟು, ಉಪಾಧಿರಹಿತನಾಗಿ, ಎರಡಳಿದು ಕರಕಮಲದಲ್ಲಿ ಅಡಗಬಲ್ಲರೆ ಪರಶಿವಲಿಂಗದಲ್ಲಿ ಅಚ್ಚಶರಣ ತಾನೇ ಎಂದನಯ್ಯ ನಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.