ಪಂಕದೊಳಗಿನ ಪಶುವಿಗೆ ಒಬ್ಬ ಪುರುಷನಿಂದ ಚೆೃತನ್ಯವಲ್ಲದೆ
ಆ ಪಂಕದೊಳಗಿನ ಪಶುವಿಗೆ ಬೇರೆ ಚೆೃತನ್ಯ ಉಂಟೆ ಹೇಳಾ ?
ಅರಣ್ಯದೊಳಗೆ ಅಜಗರನೆಂಬ ಸರ್ಪನು
ಆಹಾರವಿಲ್ಲದೆ ಇರಲು ಅದಕ್ಕೆ ಪರಶಿವನು
ತಾವೇ ತಮ್ಮ ಕರುಣ ಕೃಪೆಯಿಂದೊಂದು ಮೃಗಪಕ್ಷಿಯ
ಅನಾಯಾಸದಿಂದ ಮುಂದೆ ಹಾಯಿಸಿದೊಡೆ,
ಆ ಅಜಗರನೆಂಬ ಸರ್ಪನು ಭಕ್ಷಿಸಿ ಇರುವುದಲ್ಲದೆ,
ತಾ ಬೇರೆ ಮೃಗಪಕ್ಷಿಗಳ ಭಕ್ಷಿಸುವ ಚೆೃತನ್ಯವುಂಟೆ ಹೇಳಾ?
ಎಷ್ಟು ದಿವಸವಾದಡೆಯೂ ಬಿದ್ದಲ್ಲಿ ಬಿದ್ದಿರ್ಪುದು ನೋಡಾ.
ಬೇಡಿ ಬಂದೀಖಾನೆ ಕೊಳ್ಳದೊಳಗೆ ಇರುವ ಪ್ರಾಣಿಗಳಿಗೆ
ಒಬ್ಬ ರಾಜನ ದಯದಿಂದ ಅನ್ನಪಾನ ಉಂಟಲ್ಲದೆ,
ಅವರಿಗೆ ಬೇರೆ ತಮ್ಮ ಸ್ವತಂತ್ರದಿಂದ ತಾವೇ
ಅನ್ನೋದಕವ ಕೊಂಬ ಚೆೃತನ್ಯ ಉಂಟೆ ಹೇಳಾ?
ಅವರು ಎಷ್ಟು ಕಾಲವಾದಡೆಯು ಇದ್ದಲ್ಲಿ ಇರುವರು ನೋಡಾ.
ತೊಟ್ಟಿಲೊಳಗಿನ ಶಿಶು ಹೊಟ್ಟೆಹಸಿದು ಒದರಿದರೆ
ಆ ಶಿಶುವಿನ ತಾಯಿ ಬಂದು ಮೊಲೆವಾಲ ಕೊಟ್ಟು
ರಕ್ಷಣಮಾಡುವದಲ್ಲದೆ
ಆ ಶಿಶುವಿಗೆ ಬೇರೆ ಸ್ವತಂತ್ರಚೈತನ್ಯ ಉಂಟೆ ಹೇಳಾ?
ಎಷ್ಟೊತ್ತಾದಡೆಯೂ ಆ ಶಿಶುವು ಇದ್ದಲ್ಲಿ ಇರುವದು ನೋಡಾ.
ಇಂತೀ ದೃಷ್ಟದಂತೆ ಇರುವೆ ಮೊದಲು ಆನೆ ಕಡೆ
ಎಂಬತ್ತುನಾಲ್ಕುಲಕ್ಷ ಜೀವರಾಶಿ ಯೋನಿಯಲ್ಲಿ
ಸುಖದುಃಖದಿಂದ ನೊಂದು ಬೆಂದು ಅಳಲಿ ಬಳಲಿ
ಭವಜಾಲದಲ್ಲಿ ತಿರುಗುವ ಜೀವಾತ್ಮರಿಗೆ ಪರಕ್ಕೆ ಪರವಾದ
ಪರಶಿವನು ತಾನೆ ತನ್ನ ಕರುಣಕೃಪೆಯಿಂದ
ಆ ಜೀವಾತ್ಮರ ಹೃದಯದಲ್ಲಿ
ಶಿವಜ್ಞಾನೋದಯವನಿತ್ತು
ಸಂಸಾರಪ್ರಪಂಚವ ನಿವೃತ್ತಿಯ ಮಾಡಿ ಬಹಿಷ್ಕರಿಸಿ
ಕ್ರಿಯಾಘನಗುರುವಾಗಿ ಬಂದು
ಲಿಂಗಾಂಗಸಮರಸವ ತೋರಿ
ಭವಬಂಧನವೆಂಬ ಭವಪಾಶವ ಛೇದಿಸಿ
ಆ ಜೀವಾತ್ಮರ ಜೀವಭಾವವನಳಿದು
ಸಜ್ಚೀವಾತ್ಮರುಗಳ ಮಾಡಿ, ರಕ್ಷಿಸುವನಲ್ಲದೆ,
ಆ ಜೀವಾತ್ಮರು ತಮ್ಮಾತ್ಮಜ್ಞಾನದಿಂದ
ಅಷ್ಟಾಂಗಯೋಗ ಅನುಪಾನ ಕ್ರಿಯೆಗಳಿಂದ ಸಾಧಿಸಿ ಭವಹಿಂಗಿಸಿ
ಪರಶಿವಲಿಂಗದಲ್ಲಿ ಬೆರಸಿದನೆಂದಡೆ ಎಂದಿಗೂ ಸಾಧ್ಯವಾಗದು.
ಅದೇನು ಕಾರಣವೆಂದೊಡೆ,
ತಮ್ಮ ನಿಜವ ತಾವರಿಯದ ಕಾರಣ.
ಎಷ್ಟು ಯುಗಾಂತರದಲ್ಲಿ ಭವಭವದಲ್ಲಿ
ಘಾಸಿಯಾಗುತ್ತಿರ್ಪರು ನೋಡೆಂದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.