Index   ವಚನ - 320    Search  
 
ಕಾಶಿಗೆ ಹೋಗಬೇಕೆಂಬಣ್ಣಗಳು ತಲೆಕೆಳಗಾಗಿ ಕಾಲುಮೇಲಾಗಿ ನಡೆವರು. ಕೇದಾರಕ್ಕೆ ಹೋಗಬೇಕೆಂಬಣ್ಣಗಳು ಕಣ್ಣು ಹಿಂದಾಗಿ ಕಾಲುಮುಂದಾಗಿ ನಡೆವರು. ಶ್ರೀಶೈಲಕ್ಕೆ ಪೋಗಬೇಕೆಂಬಣ್ಣಗಳು ತಲೆಯಿಲ್ಲದೆ ಕಾವಡಿಯ ಹೊತ್ತು ನಡೆಯುವರು. ಇಂತೀ ತ್ರಿವಿಧ ಪುರುಷರಿಗೆ ತ್ರಿಲಿಂಗದ ದರುಶನವಾಗದು. ಮೂರು ಬಿಟ್ಟು, ಅಷ್ಟ ಕುಟ್ಟಿ, ಮೂರು ಪರ್ವತ ಸುಟ್ಟು, ಈರಾರು ಬಿಟ್ಟು, ಮೂರುಗೂಡಿದ ಬಟ್ಟೆಯ ಪಿಡಿದು ಹೊಗುವಣ್ಣಗಳಿಗೆ ತ್ರಿವಿಧ ಕ್ಷೇತ್ರದಲ್ಲಿರುವ ಲಿಂಗದರುಶನವಾಗುವದು, ಪರಿಣಾಮದೋರುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.