Index   ವಚನ - 347    Search  
 
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನಳಿದಲ್ಲದೆ ಭವ ಹಿಂಗದೆಂಬರು ಭಿನ್ನ ಭಾವದಜ್ಞಾನಕಲಾತ್ಮರು. ಅವೇನು ತಮ್ಮ ಸಂಬಂಧವೆ? ಸಂಬಂಧವಲ್ಲ. ತಮ್ಮ ಸಂಬಂಧವಾದ ಮಲತ್ರಯವ ಪೇಳ್ವೆ. ತನುವೇ ಮಣ್ಣು, ಮನವೇ ಹೆಣ್ಣು, ಆತ್ಮವೇ ಹೊನ್ನು. ಇಂತೀ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನೊಳಗಿಟ್ಟುಕೊಂಡು ಬಾಹ್ಯದ ಮಲತ್ರಯಂಗಳ ವಿಸರ್ಜಿಸಿ ಭವಹಿಂಗಿಸಬೇಕೆಂದು ಗುಡ್ಡ ಗಂಹರವ ಸೇರುವರು. ಅವರಿಗೆ ಎಂದಿಗೂ ಭವಹಿಂಗದು. ಮತ್ತೆಂತೆಂದೊಡೆ: ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಅಂಗದ ಮೇಲೆ ಇಷ್ಟಲಿಂಗವ ಸ್ವಾಯತವ ಮಾಡಿಕೊಂಡು ಆ ಇಷ್ಟಬ್ರಹ್ಮವನು ತನುಮನಧನದಲ್ಲಿ ಸ್ವಾಯತವ ಮಾಡಿ, ಆ ತ್ರಿವಿಧ ಲಿಂಗದ ಸತ್ಕ್ರಿಯಾ ಸಮ್ಯಜ್ಞಾನ ಸ್ವಾನುಭಾವದಾಚರಣೆಯಿಂದ ಆ ತನುತ್ರಯದ ಪ್ರಕೃತಿಯನಳಿದು, ಆ ಮಾಯಾಮಲಸಂಬಂಧವೆಂಬ ಸತಿಸುತರು ಮಾತಾಪಿತೃಗಳ ಸಂಬಂಧವಿಡಿದು, ಆಚರಿಸಿದಡೆಯು ಅದಕ್ಕೇನು ಚಿಂತೆಯಿಲ್ಲ, ಇಷ್ಟುಳ್ಳವರಿಗೆ ಭವ ಹಿಂಗಿ ಮುಕ್ತಿಯಾಗುವದು. ಪ್ರಮಥಗಣಂಗಳ ಸಮ್ಮತ ಶಿವಜ್ಞಾನಿಗಳು ಮೆಚ್ಚುವರು. ಅದೇನು ಕಾರಣವೆಂದಡೆ: ಈ ಮಲಸಂಬಂಧ ಜೀವಾತ್ಮರೆಲ್ಲ ದೇಹ ಇರುವ ಪರ್ಯಂತರವಲ್ಲದೆ ಲಿಂಗಾಂಗಿಗೆ ಇದ್ದೂ ಇಲ್ಲದಂತೆ ನೋಡೆಂದನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.