Index   ವಚನ - 483    Search  
 
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮರಂಧ್ರ, ಶಿಖಾ, ಪಶ್ಚಿಮವೆಂಬ ನವಚಕ್ರಸ್ಥಾನವ ಗುದ ಗುಹ್ಯ ನಾಭಿ ಹೃದಯ ಕಂಠ ಉತ್ತಮಾಂಗ ಅಳ್ಳನೆತ್ತಿ ನಡುನೆತ್ತಿ ಹಿಂಭಾಗದ ಕಳ್ಳಕುಣಿಕೆಯೆಂದು ಪೇಳುವಿರಿ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗ ಇರ್ಪುದೇ? ಇಲ್ಲ. ಮತ್ತಂ, ಬಲ್ಲಾದರೆ ಪೇಳಿರಿ, ಇಲ್ಲವಾದರೆ ನಮ್ಮ ಶಿವಗಣಂಗಳ ಕೇಳಿರಿ. ಅದೆಂತೆಂದಡೆ : ಆಧಾರಚಕ್ರವೆಂಬುದೇ ಘ್ರಾಣ. ಸ್ವಾದ್ಥಿಷ್ಠಾನಚಕ್ರವೆಂಬುದೇ ಜಿಹ್ವೆಸ್ಥಾನ. ಮಣಿಪೂರಕಚಕ್ರವೆಂಬುದೇ ನೇತ್ರಸ್ಥಾನ. ಅನಾಹತಚಕ್ರವೆಂಬುದೇ ತ್ವಕ್ಕಿನಸ್ಥಾನ. ವಿಶುದ್ಧಿಚಕ್ರವೆಂಬುದೇ ಕರ್ಣಸ್ಥಾನ. ಆಜ್ಞಾಚಕ್ರವೆಂಬುದೇ ಹೃದಯಸ್ಥಾನ. ಬ್ರಹ್ಮಸ್ಥಾನವೆಂಬುದೇ ಕರಸ್ಥಲ. ಶಿಖಾಸ್ಥಾನವೆಂಬುದೇ ಮನಸ್ಥಲ. ಪಶ್ಚಿಮಸ್ಥಾನವೆಂಬುದೇ ಪ್ರಾಣಸ್ಥಲ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗವು ಸಂಬಂಧವಾಗಿರುವುದಲ್ಲದೆ ಅಂತಪ್ಪ ಜಡದೇಹಿ ನವಸ್ಥಾನದ ಮಾಂಸರಕ್ತದಲ್ಲಿ ಪರಶಿವಲಿಂಗವು ಇರ್ಪುದೆ? ಇಲ್ಲ. ಅದೇನು ಕಾರಣವೆಂದಡೆ : ಘ್ರಾಣದಲ್ಲಿ ಆಚಾರಲಿಂಗಸ್ವಾಯತವಿಲ್ಲದೆ ಗಂಧ ದುರ್ಗಂಧ ಮೊದಲಾದ ಆವ ಗಂಧದ ವಾಸನೆಯು ತಿಳಿಯದು. ಜಿಹ್ವೆಯಲ್ಲಿ ಗುರುಲಿಂಗಸ್ವಾಯತವಿಲ್ಲದೆ ಸವಿ ಕಹಿ ಮೊದಲಾದ ಆವ ರುಚಿಸ್ವಾದವು ತಿಳಿಯದು. ನೇತ್ರದಲ್ಲಿ ಶಿವಲಿಂಗಸ್ವಾಯತವಿಲ್ಲದೆ ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ ಮೊದಲಾದ ಷಡ್ವರ್ಗದ ರೂಪು ಲಕ್ಷಣ ತಿಳಿಯದು. ತ್ವಕ್ಕಿನಲ್ಲಿ ಜಂಗಮಲಿಂಗಸ್ವಾಯತವಿಲ್ಲದೆ ಮೃದು ಕಠಿಣ ಮೊದಲಾದ ಆವ ಸುಖವು ತಿಳಿಯದು. ಶ್ರೋತ್ರದಲ್ಲಿ ಪ್ರಸಾದಲಿಂಗಸ್ವಾಯತವಿಲ್ಲದೆ ಸುಸ್ವರ ಅಪಸ್ವರ ಮೊದಲಾದ ಆವ ಸ್ವರಲಕ್ಷಣವು ತಿಳಿಯದು. ಹೃದಯದಲ್ಲಿ ಮಹಾಲಿಂಗಸ್ವಾಯತವಿಲ್ಲದೆ ಷಡಿಂದ್ರಿಸುಖತೃಪ್ತಿ ಮೊದಲಾದ ಸಕಲೇಂದ್ರಿಯ ಸುಖತೃಪ್ತಿ ಸಂತೋಷವು ತಿಳಿಯದು. ಕರಸ್ಥಲದಲ್ಲಿ ನಿರಾಕಾರವಾದ ನಿಷ್ಕಲಲಿಂಗವೆಂಬ ಇಷ್ಟಲಿಂಗ ಸ್ವಾಯತವಿಲ್ಲದೆ ಷಡ್ವಿಧಾಂಗದಲ್ಲಿ ಷಡ್ವಿಧಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಮನದಲ್ಲಿ ಶೂನ್ಯಲಿಂಗವೆಂಬ ಪ್ರಾಣಲಿಂಗಸ್ವಾಯತವಿಲ್ಲದೆ ಸರ್ವೇಂದ್ರಿಯಲ್ಲಿ ಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಪ್ರಾಣವೆಂಬಾತ್ಮನಲ್ಲಿ ಭಾವಲಿಂಗಸ್ವಾಯತವಿಲ್ಲದೆ ಸರ್ವಾಂಗಲಿಂಗಮಯ ಪರವಸ್ತುಸ್ವರೂಪ ತಾನೆಂದು ತಿಳಿಯದು. ಇಂತಪ್ಪ ವಿಚಾರವನು ತಿಳಿಯಬಲ್ಲಾತನೇ ಅನಾದಿಶರಣನು. ಅಂತಪ್ಪ ಪರಶಿವಲಿಂಗದ ಸ್ವಾಯತಸಂಬಂಧವಾದ ಭೇದವ ತಿಳಿಯದೆ ಅಂಗಭಾವ ಮುಂದುಗೊಂಡು ಇರ್ಪಾತನೇ ಭವಭಾರಿಕನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.