ವಚನ - 881     
 
ಆದಿ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ ಪಾದೋದಕಸ್ಥಲ ಭಕ್ತಸ್ಥಲಂಗಳನಾರು ಬಲ್ಲರಯ್ಯಾ? ಬಸವಣ್ಣಲ್ಲದೆ, ಆದಿಯ ತೋರಿದ, ಅನಾದಿಯನರುಪಿದ ಬಸವಣ್ಣ, ನಾದ ಬಿಂದು ಕಳೆಗಳ ಭೇದಮಂ ಭೇದಿಸಿ ತೋರಿದ ಬಸವಣ್ಣ, ಹುಟ್ಟುವುದ ಮುಟ್ಟದೆ ತೋರಿದ ಬಸವಣ್ಣ, ಹುಟ್ಟದೆ ಇದ್ದುದ ಮುಟ್ಟಿ ತೋರಿದ ಬಸವಣ್ಣ, ಎನ್ನ ಅಂತರಂಗವನನುಮಾಡಿ ನಿಜಲಿಂಗವ ನೆಲೆಗೊಳಿಸಿದ ಬಸವಣ್ಣ, ಗುಹೇಶ್ವರನ ಶರಣ ಸಂಗನಬಸವಣ್ಣನಿಂದ ಸಕಲಸನುಮತವನರಿದೆನಯ್ಯಾ.