ಮಲದ ಕುಳಿವೊಂದು ಮುಖ.
ಜಲದ ಕುಳಿವೊಂದು ಮುಖ.
ರಕ್ತದ ಕುಳಿವೊಂದು ಮುಖ.
ಕೀವು ಕ್ರಿಮಿ ಕೀಟಕ ಜಂತು
ತುಂಬಿಪ್ಪ ಕುಳಿವೊಂದು ಮುಖ.
ವಾತ ಪಿತ್ತ ಶ್ಲೇಷ್ಮ ಸಂಯೋಗದಲ್ಲಿ
ಸರ್ವದೋಕುಳಿ ಮುಖವಾಗಿದೆ ನೋಡಾ.
ಕಿವಿಯಲ್ಲಿ ಕುಗ್ಗಿ, ಕಣ್ಣಿನಲ್ಲಿ ಜುರಿ,
ಮೂಗಿನಲ್ಲಿ ಸಿಂಬಳ, ಹಲ್ಲಿನಲ್ಲಿ ಕಿಣಿ,
ಉರದಲ್ಲಿ ಮಾಂಸದ ಗ್ರಂಥಿ, ಅಮೇಧ್ಯದ ಹುತ್ತ,
ಒಳಗೆ ಕರುಳ ಚಪ್ಪಳಿಗೆ
ಹೊರಗೆ ಚರ್ಮದ ಹೊದಿಕೆ.
ಈ ಹೆಣ್ಣು ರೂಪಿನ ಬಣ್ಣದ ಕಾಯವ ಕಂಡು
ಕಣ್ಣನಟ್ಟು ಮನಮುಟ್ಟಿ ಮರುಳಾದರಣ್ಣಗಳು.
ಮುಕ್ಕಣ್ಣ ನಿಮ್ಮನರಿಯದೆ ಬಣ್ಣದ ಹಿರಿಯರು
ಭಕ್ತರು ಭ್ರಮೆಗೊಂಡರೆ
ನಾನು ನೋಡಿ ಹೇಸಿ ನಾಚಿ ಕಡೆಗೆ ತೊಲಗಿದೆನಯ್ಯ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.