Index   ವಚನ - 1    Search  
 
ಎಲಾ ಶಿವಭಕ್ತನೇ ನೀ ಕೇಳು: ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವಿರಲ್ಲ ಶಿವಭಕ್ತಿಯ ನೆಲೆಯ ಬಲ್ಲಿರೇನಯ್ಯ? ಅದು ಎಂತೆಂದರೆ: ಶಿವಭಕ್ತನಾದ ಬಳಿಕ ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಡಬೇಕು: ತನುವ ಕೊಡಬೇಕು ಗುರುವಿಗ; ಮನವ ಕೊಡಬೇಕು ಲಿಂಗಕ್ಕೆ; ಧನವ ಕೊಡಬೇಕು ಜಂಗಮಕ್ಕೆ. ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಟ್ಟು, ನಿಷ್ಕಳಂಕವೇ ತಾನಾಗಿ, ಆರು ಚಕ್ರವ ಹತ್ತಿ, ಮೀರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಶಿವಭಕ್ತನೆಂದು ನಮೋ ಎಂಬುವೆನಯ್ಯಾ. ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವ, ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ!