Index   ವಚನ - 2    Search  
 
ಎಲಾ ಬ್ರಾಹ್ಮಣಾ ನೀ ಕೇಳು: ಬರಿದೆ 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವಿರಲ್ಲದೆ, ಬ್ರಹ್ಮದ ನೆಲೆಯ ಬಲ್ಲಿರೇನಯ್ಯಾ? ಅದು ಎಂತೆಂದಡೆ: ವೇದಮಯವಾಗಿರ್ಪುದೇ ಬ್ರಹ್ಮ; ಬ್ರಹ್ಮಮಯವಾಗಿರ್ಪುದೇ ವೇದ. ಇಂತೀ ಚತುರ್ವೇದ ಪ್ರಕರಣಮಂ ಓದಿ ಹಾದಿಯಂ ತಪ್ಪಿ ಬೀದಿಯ ಸೂಳೆ[ಯ] ಹಿಂದೆ ತಿರುಗಿದ ಬಳಿಕ ನಿನಗೆ ಬ್ರಹ್ಮತ್ವವು ಎಲ್ಲೈತೆಲಾ? ಬ್ರಹ್ಮತ್ವವು ದಾವುದೆಂದಡೆ ಪೇಳುವೆನು ಕೇಳೆಲಾ: ವೇದದೊಳಗಣ ತತ್ತ್ವಸಾರವನು ತೆಗೆದು, ಗುರುಪಥವು ಅನುಸರಣೆಯಾಗಿ, ನಿಜಮಾರ್ಗವ ಕಂಡು ನಿತ್ಯತ್ವ ನೀನಾಗಿ, ನಿರುಪಮ ನಿರ್ಮಾಯ ನಿರ್ವೇದ ವಸ್ತುವ ತಿಳಿದು, ಸಾಧುಸಜ್ಜನರೊಡನಾಡಿ ಸಾಕ್ಷಾತ್ಕಾರವಾಗಿ, ಸಾಯುಜ್ಯ ಸಾಮಿಪ್ಯ ಪಥಮಂ ಕಂಡುಳಿದು, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಬ್ರಾಹ್ಮಣನೆಂದು ನಮೋ ಎಂಬುವೆನಯ್ಯಾ. ಬರಿದೆ ಬಡಿವಾರಕ್ಕೆ ಮಿಂದುಟ್ಟು 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ, ಕೂಡಲಾದಿ ಚೆನ್ನಸಂಗಮದೇವಾ!