Index   ವಚನ - 4    Search  
 
ಎಲಾ, ಸೂಳೆಮಗನೇನ ಬಲ್ಲನಯ್ಯಾ ಕುದುರೆಯಾ ಕುರುಹನು? ಶೀಲವಂತನೇನ ಬಲ್ಲನಯ್ಯಾ ಗುರುಲಿಂಗ ಜಂಗಮದ ಕುರುಹನು? ಗುರುಲಿಂಗ ಜಂಗಮವು ಮನೆಗೆ ಬಂದು ಬೀಯೆಂಬೋ ಪಾಪವು ಕ್ಷಯವಾಗಲೆಂದು 'ಭಿಕ್ಷಾ'ಎಂದು ನಿಂದಡೆ 'ಅಯ್ಯಾ ನಮ್ಮ ಹಿರಿಯರು ಬಂದಿಲ್ಲಾ' 'ನಮ್ಮ ಕಟ್ಟುಬಿನ್ನದ ಜಂಗಮವು ಬಂದಿಲ್ಲಾ' 'ಇನ್ನೂ ಶೀಲವು ತೀರಿಲ್ಲಾ, ತಿರುಗಿ ಬಾ' ಎಂದು ಹಿಂದಕ್ಕೆ ಕಳುಹಿದಡೆ ಜಂಗಮದ ನೆಲೆ ಯಾವುದೆಲಾ? ಶೀಲವಂತನಿಗೆ ಶೀಲ ಯಾವುದೆಂದಡೆ, ಅದಂ ಪೇಳ್ವೆ ಕೇಳು: ಪರಕ್ರೂರತ್ವವ ಮರೆದು, ಪರಭೋಗದಭಿಲಾಷೆಯ ಬಿಟ್ಟು, ಪರಮ ವಿರಕ್ತಿಯಂ ಅಂಗೀಕರಿಸಿ, ಪಾಪಮಂ ಮುಟ್ಟಿನೋಡದೆ ಕಾಣದೆ ಕೇಳದೆ ನಿರ್ಲಿಪ್ತನಾಗಿ ನಿಜವಸ್ತುವಾದಾ ಶಿವಲಿಂಗ ಜಂಗಮವು ಮನೆಗೆ ಬಂದಡೆ ಅನ್ನ ಅಗ್ಗಣಿಯ ಕೊಟ್ಟು ತೃಪ್ತಿಯ ಬಡಿಸಿ ನಿತ್ಯತ್ವನಾಗಿ ಮೋಕ್ಷವ ಕಂಡಡೆ, ಶೀಲವಂತನೆಂದು ನಮೋ ಎಂಬುವೆನಯ್ಯಾ. ಬರಿದೆ, 'ನಾ ಶೀಲವಂತ' 'ನೀ ಶೀಲವಂತ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ