ಸೂಳೆಯ ತನುಮನದ ಕೊನೆಯಲ್ಲಿ
ವಿಟಗಾರನೇ ಪ್ರಾಣಲಿಂಗ;
ಶೀಲವಂತನ ತನುಮನದ ಕೊನೆಯಲ್ಲಿ
ಭವಿಯೇ ಪ್ರಾಣಲಿಂಗ;
ನಿತ್ಯ ಪ್ರಸಾದಿಯ ತನುಮನದ ಕೊನೆಯಲ್ಲಿ
ಬೆಕ್ಕೇ ಪ್ರಾಣಲಿಂಗ;
ಬ್ರಾಹ್ಮಣರ ತನುಮನದ ಕೊನೆಯಲ್ಲಿ
ಸೂತಕವೇ ಪ್ರಾಣಲಿಂಗ;
ಇಂಥವರಿಗೆಲ್ಲಾ ಇಂತಾಯಿತು!
ದೇವರಗುಡಿಯೆಂದು ದೇಗುಲವ ಪೊಕ್ಕು
ನಮಸ್ಕಾರವ ಮಾಡುವಂಗೆ
ಹೊರಗೆ ಕಳೆದ ಪಾದರಕ್ಷೆಯೆ ಪ್ರಾಣಲಿಂಗ.
ಅದು ಎಂತೆಂದಡೆ:
ಸೂಳೆಗೆ ವಿಟನ ಹಂಬಲು;
ಶೀಲವಂತನಿಗೆ ಭವಿಯ ಹಂಬಲು;
ನಿತ್ಯಪ್ರಸಾದಿಗೆ ಬೆಕ್ಕಿನ ಹಂಬಲು;
ಬ್ರಾಹ್ಮಣನಿಗೆ ಸೂತಕದ ಹಂಬಲು;
ಇವರು ಭಕ್ತಿಶೂನ್ಯರು ಕಾಣಿರಯ್ಯಾ!
ಇವಂ ಬಿಟ್ಟು,
ಪರಸ್ತ್ರೀಯರ ಮುಟ್ಟದಿರ್ಪುದೇ ಶೀಲ;
ಪರದ್ರವ್ಯ[ವ]ಅಪಹರಿಸದಿರುವುದೇ ಆಚಾರ;
ಪರನಿಂದೆ[ಯ] ಕರ್ಣದಿಂ ಕೇಳದಿರ್ಪುದೇ ನಿತ್ಯಪ್ರಸಾದತ್ವ;
ಪರರಂ ದೂಷಿಸದಿರ್ಪುದೇ ಬ್ರಹ್ಮತ್ವ.
ಇಂತಿದರಲ್ಲಿ ನಡೆದು,
ದೇವರಿಗೆ ನಮಸ್ಕಾರವ ಮಾಡುವುದೇ ನಮಸ್ಕಾರ.
ಹಿಂದಿನ ಪುರಾತನರು ನಡೆದರೆಂಬೋ ಶಾಸ್ತ್ರವಂ ಕೇಳಿ,
ಈಗಿನ ಕಿರಾತರು 'ನಾವು ಶೀಲವಂತರು'
'ನಾವು ಆಚಾರವಂತರು', 'ನಾವು ನಿತ್ಯಪ್ರಸಾದಿಗಳು',
'ನಾವು [ 'ಪೂಜಸ್ಥರು'], 'ನಾವು ಬ್ರಾಹ್ಮಣರು',
ಎಂದು ತಿರುಗುವ
ಮೂಳ ಹೊಲೆಯರ ಮುಖವ
ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ
Art
Manuscript
Music
Courtesy:
Transliteration
Sūḷeya tanumanada koneyalli
viṭagāranē prāṇaliṅga;
śīlavantana tanumanada koneyalli
bhaviyē prāṇaliṅga;
nitya prasādiya tanumanada koneyalli
bekkē prāṇaliṅga;
brāhmaṇara tanumanada koneyalli
sūtakavē prāṇaliṅga;
inthavarigellā intāyitu!
Dēvaraguḍiyendu dēgulava pokku
namaskārava māḍuvaṅge
horage kaḷeda pādarakṣeye prāṇaliṅga.
Adu entendaḍe:
Sūḷege viṭana hambalu;
śīlavantanige bhaviya hambalu;
nityaprasādige bekkina hambalu;
brāhmaṇanige sūtakada hambalu;
ivaru bhaktiśūn'yaru kāṇirayyā!
Ivaṁ biṭṭu,Parastrīyara muṭṭadirpudē śīla;
paradravya[va]apaharisadiruvudē ācāra;
paraninde[ya] karṇadiṁ kēḷadirpudē nityaprasādatva;
pararaṁ dūṣisadirpudē brahmatva.
Intidaralli naḍedu,
dēvarige namaskārava māḍuvudē namaskāra.
Hindina purātanaru naḍedarembō śāstravaṁ kēḷi,
īgina kirātaru'nāvu śīlavantaru'
'nāvu ācāravantaru', 'nāvu nityaprasādigaḷu',
'nāvu [ 'pūjastharu'], 'nāvu brāhmaṇaru',
endu tiruguva
mūḷa holeyara mukhava
nōḍalāgadu kāṇō
kūḍalādi cannasaṅgamadēvā