ಅಯ್ಯಾ, ಯತಿಯತ್ವವ ಪಡೆದೆನೆಂಬೋ
ಮನುಜನೇ, ನೀ ಕೇಳು:
ನಿನ್ನ ಯತಿಯತ್ವದ ಬಗೆ ಎಂತೆಲಾ?
ಬರಿದೆ ದ್ರವ್ಯಕ್ಕೆ ಆಶೆಮಾಡಿ,
ಪರರ ಕಾರ್ಪಣ್ಯದಿಂದ ಕಾಡಿ ಬೇಡಿ,
ದ್ರವ್ಯವ ಗಳಿಸಿಕೊಂಡು, ಜನರ ಕಟ್ಟಿಕೊಂಡು
ಬಡಿವಾರದಿಂದ ತಿರುಗಿದ ಬಳಿಕ,
ನಿನಗೆ ಯತಿಯತ್ವವು ಎಲ್ಲೈತೆಲಾ?
ಅದು ಎಂತೆಂದರೆ, ಯತಿಯತ್ವವ ಪೇಳುವೆನು ಕೇಳೆಲಾ:
ಯತಿ ನೀನಾದ ಬಳಿಕ
ತನುವಿನ ಹಂಗು ಹರಿಯಬೇಕು;
ಮನವ ಘನಲಿಂಗಕ್ಕೆ ಕಟ್ಟಿಹಾಕಬೇಕು;
ಧನವ ಸ್ವಪ್ನದಲ್ಲಿ ಮುಟ್ಟಲಾಗದು;
ಅನ್ನದ ಆಸೆಯ ಬಿಡಬೇಕು;
ಚಿನ್ಮಯನಾಗಿ ನಡೆಯಬೇಕು;
ಚಿಂತೆಯ ಮರೆತು ವೈರಾಗ್ಯದಿಂದಿರಬೇಕು;
ಕಾಮದ ಹಂಗ ಕಳೆಯಬೇಕು;
ಕರ್ಮೇಂದ್ರಿಯಂಗಳ ಸುಡಬೇಕು;
ಲಿಂಗದಲ್ಲಿ ಕರುಣ ಇರಬೇಕು.
ಸ್ಫಟಿಕದಂತೆ ನಿರ್ಮಳ ಕಾಯನಾಗಿ,
ನಿಶ್ಚಿಂತನಾಗಿ, ಮೋಕ್ಷವ ಕಂಡಡೆ
ಯತಿವರನೆಂದು ನಮೋ ಎಂಬುವೆನಯ್ಯಾ!
ಬರಿದೆ ಯತಿ ಎನಿಸಿಕೊಂಡು
ಕೋಪಾಟೋಪದೊಳು ಬಿದ್ದು ಹೊರಳಾಡುವ
ಮೂಳ ಹೊಲೆಯರ ಮುಖವ
ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ
Art
Manuscript
Music
Courtesy:
Transliteration
Ayyā, yatiyatvava paḍedenembō
manujanē, nī kēḷu:
Ninna yatiyatvada bage entelā?
Baride dravyakke āśemāḍi,
parara kārpaṇyadinda kāḍi bēḍi,
dravyava gaḷisikoṇḍu, janara kaṭṭikoṇḍu
baḍivāradinda tirugida baḷika,
ninage yatiyatvavu ellaitelā?
Adu entendare, yatiyatvava pēḷuvenu kēḷelā:
Yati nīnāda baḷika
tanuvina haṅgu hariyabēku;
manava ghanaliṅgakke kaṭṭihākabēku;
dhanava svapnadalli muṭṭalāgadu;
annada āseya biḍabēku;
cinmayanāgi naḍeyabēku;
cinteya maretu vairāgyadindirabēku;
kāmada haṅga kaḷeyabēku;
karmēndriyaṅgaḷa suḍabēku;Liṅgadalli karuṇa irabēku.
Sphaṭikadante nirmaḷa kāyanāgi,
niścintanāgi, mōkṣava kaṇḍaḍe
yativaranendu namō embuvenayyā!
Baride yati enisikoṇḍu
kōpāṭōpadoḷu biddu horaḷāḍuva
mūḷa holeyara mukhava
nōḍalāgadu kāṇō
kūḍalādi cannasaṅgamadēvā