Index   ವಚನ - 8    Search  
 
ಶಿವನಿಂದಧಿಕ ದೈವ ಇಲ್ಲ, ಶಿವಭಕ್ತಂಗಧಿಕ ಕುಲಜನಿಲ್ಲವೆಂದು ಹೇಳುವುವು ಆಗಮ ಶ್ರುತಿ. ಅದು ಎಂತೆಂದಡೆ: ಸರ್ವ ಅಪ್ಸರರು ಸರ್ವ ಗಂಧರ್ವರು ಸರ್ವ ಯತಿಗಳು ಸರ್ವ ಜತಿಗಳು ಎಲ್ಲಾರು, ಎಲಾ ಈ ಶಿವಲಿಂಗಮಂ ಪೂಜಿಸಿ ಮೋಕ್ಷವ ಪಡೆದೆನೆಂಬೋ ಭಕ್ತರು ನೀವು ಕೇಳಿರಯ್ಯಾ: ಈ ಶಿವಲಿಂಗಮಂ ಬ್ರಹ್ಮ ಪೂಜಿಸಿ ಭವ ಹಿಂಗಿಸಿದ; ವಿಷ್ಣು ಪೂಜಿಸಿ ಹತ್ತು ಅವತಾರದ ದೋಷವನೀಡಾಡಿದ; ಇಂದ್ರ ಪೂಜಿಸಿ ಅಯಿಶ್ವರ್ಯಮಂ ಪಡೆದ; ಋಷಿಗಳು ಪೂಜಿಸಿ ಕುಲವಂ ಕಳೆದು ಬ್ರಹ್ಮರೆನಿಸಿ ನಿಶ್ಚಿಂತರಾದರು; ಮಹಾಗಣಾಧೀಶ್ವರರೂ ಪೂಜಿಸಿ ಕೈಲಾಸಕ್ಕೆ ಸೋಪಾನವ ಕಟ್ಟಿದರು; ಮಿಕ್ಕ ನರರು ಪೂಜಿಸಿ [ಸು]ರಲೋಕವನೈದಿದರೆಂಬೋ ಶಾಸ್ತ್ರವಂ ಕೇಳಿ, ಓದಿ, ಹಾಡಿ, ತಿಳಿದು, ಪರಮ ವಿರಕ್ತಿಯ ನಿಟ್ಟಿಸಲಾರದೆ ಪರದೈವಕಡ್ಡ ಬಿದ್ದು ಹಿಂದೆ ಅವ ಕಟ್ಟಿದ ಲಿಂಗವು ಕೋಣನ ಕೊರಳಿಗೆ ಗುದಿಗೆ ಕಟ್ಟಿದಂತಾಯಿತು ಕಾಣಾ ಕೂಡಲಾದಿ ಚನ್ನಸಂಗಮದೇವಾ