ಆದಿ ಮಧ್ಯ ಅವಸಾನ ಹೇಗೆಂದಡೆ:
ಗುರುವಿನ ಕರಕಮಲದಲ್ಲಿ ಹುಟ್ಟಿದುದೇ ಆದಿ.
ಗುರುಲಿಂಗಜಂಗಮ ಪ್ರಸಾದ ಕೊಂಬುದೇ ಮಧ್ಯ.
ಜಂಗಮದಲ್ಲಿ ಲಯವಾದುದೇ ಅವಸಾನ.
ಇದ ತಿಳಿದು ಎಲ್ಲ ಗಣಂಗಳು ಎನಗೆ
ಮರ್ತ್ಯಲೋಕಕ್ಕೆ ಹೋಗಿ ಭಕ್ತಗಣಂಗಳ ಕೈಯಲ್ಲಿ
ಹೊಯಿಸಿಕೊಂಡು, ಬೈಸಿಕೊಂಡು
ಅವರೊಕ್ಕು ಮಿಕ್ಕ ಪ್ರಸಾದವ ಹಾರೈಸಿಕೊಂಡು
ಅವರ ನೆರಮನೆಯ ಅವರವರ ಹೊರ ಮನೆಯಲ್ಲಿರ್ದು
ಅವರ ಕರುಣಪ್ರಸಾದವ ಕೊಂಡು ಬಾಯೆಂದು
ಆಜ್ಞೆಯನಿತ್ತ ಭೇದವ ಗುರು ಅರುಹಿದನಾಗಿ,
ಗಣದಾಸಿ ವೀರಣ್ಣನೆಂಬ ನಾಮವಾಯಿತ್ತೆನಗೆ.
ಸತ್ಯಣ್ಣನ ಮನೆಯ ಬಂಟ ನಾನಯ್ಯ.
ನನ್ನನು ತಮ್ಮ ಗಣಂಗಳು ಸಲಹಿ
ಕೃತಾರ್ಥವ ಮಾಡಿದರಯ್ಯಾ.
ಅವರಿಗೇನೆಂದುಪಮಿಸುವೆನಯ್ಯಾ,
ಅವರು ಮಹಾದೇವನಲ್ಲದೆ ಬೇರುಂಟೆ?
ಅವರ ಮನೆಯ ದಾಸಾನುದಾಸ ನಾನು.
ಅವರ ಮನೆಯ ಹೂವಾಡಿಗನು.
ನೂತನ ಗಣಂಗಳೆಲ್ಲರನು ಎನ್ನ
ಇಷ್ಟಲಿಂಗದೊಳಗೆ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ