ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ
ಹೇಳಿಹೆ ಕೇಳಿರಣ್ಣ:
ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ;
ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ;
ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ;
ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ;
ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ;
ವಿಭೂತಿ ಸಾಧ್ಯವಾಯಿತ್ತು ಓಹಿಲಯ್ಯಗಳಿಗೆ;
ರುದ್ರಾಕ್ಷಿ ಸಾಧ್ಯವಾಯಿತ್ತು ಚೇರಮರಾಯಗೆ;
ಪಂಚಾಕ್ಷರಿ ಸಾಧ್ಯವಾಯಿತ್ತು ಅಜಗಣ್ಣಂಗೆ.
ಇನ್ನು ಷಟ್‍ಸ್ಥಲದ ನಿರ್ಣಯವ ಕೇಳಿ:
ಭಕ್ತಸ್ಥಲ ಬಸವಣ್ಣಂಗಾಯಿತ್ತು;
ಮಾಹೇಶ್ವರಸ್ಥಲ ಮಡಿವಾಳಯ್ಯಂಗಾಯಿತ್ತು;
ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು;
ಪ್ರಾಣಲಿಂಗಿಸ್ಥಲ ಸಿದ್ಧರಾಮಯ್ಯಂಗಾಯಿತ್ತು;
ಶರಣಸ್ಥಲ ಪ್ರಭುದೇವರಿಗಾಯಿತ್ತು;
ಐಕ್ಯಸ್ಥಲ ಅಜಗಣ್ಣಂಗಾಯಿತ್ತು.
ಇನ್ನು ಷಡುಸ್ಥಲದ ವಿವರವಂ ಪೇಳ್ವೆನು.-
ಭಕ್ತಸ್ಥಲದ ವಿವರವು:
ಗುರುಲಿಂಗಜಂಗಮವು ಒಂದೆಯೆಂದು ಕಂಡು
ಸದಾಚಾರದಲ್ಲಿ ನಡೆವನು,
ತ್ರಿಕಾಲ ಮಜ್ಜನವ ನೀಡುವನು,
ಲಾಂಛನಧಾರಿಗಳ ಕಂಡಡೆ ವಂದನೆಯ ಮಾಡುವನು,
ಆಪ್ಯಾಯನಕ್ಕೆ ಅನ್ನವ ನೀಡುವನು,
ಜಂಗಮಕ್ಕೆ ಪ್ರತಿ ಉತ್ತರವ ಕೊಡನು.
ಪೃಥ್ವಿ ಅಂಗವಾಗಿಪ್ಪುದೆ ಭಕ್ತಿಸ್ಥಲವು.
ಸಾಕ್ಷಿ:
"ಮಜ್ಜನಂ ತು ತ್ರಿಕಾಲೇಷು ಶುಚಿಪಾಕಸಮರ್ಪಿತಂ |
ಭವಿಸಂಗಪರಿತ್ಯಾಗಂ ಇತ್ಯೇತೇ ಭಕ್ತಿಕಾರಣಂ ||
ಸದಾಚಾರೇ ಶಿವಭಕ್ತಿಃ ಲಿಂಗಜಂಗಮೇಕಾಧಿಕಂ |
ಲಾಂಛನೇನ ಶರಣ್ಯಂ ಚ ಭಕ್ತಿಸ್ಥಲಂ ಮಹೋತ್ತಮಂ ||"
ಇನ್ನು ಮಾಹೇಶ್ವರಸ್ಥಲದ ವಿವರವು:
ಪರಸ್ತ್ರೀ ಪರನಿಂದೆ ಪರದ್ರವ್ಯ ಪರಹಿಂಸೆ ಅನೃತ
ಇವು ಪಂಚಮಹಾಪಾತಕವು,
ಇವ ಬಿಟ್ಟು ಲಿಂಗನಿಷ್ಠೆಯಲ್ಲಿ ಇರ್ದು
ಜಲವೆ ಅಂಗವಾಗಿಪ್ಪುದೆ ಮಾಹೇಶ್ವರಸ್ಥಲವು.
ಸಾಕ್ಷಿ:
"ಪರಸ್ತ್ರೀಯಂ ಪರಾರ್ಥಂ ಚ ವರ್ಜಿತೋ ಭಾವಶುದ್ಧಿಮಾನ್ |
ಲಿಂಗನಿಸ್ಸಂಗಿಯುಕ್ತಾತ್ಮಾ ಮಹೇಶಸ್ಥಲಮುತ್ತಮಂ ||"
ಇನ್ನು ಪ್ರಸಾದಿಸ್ಥಲದ ವಿವರ:
ಲಿಂಗಕ್ಕೆ ಅರ್ಪಿಸಿದುದ ಲಿಂಗನೆನಹಿನಿಂದೆ ಸ್ವೀಕರಿಸುವುದು,
ಅನರ್ಪಿತವ ವರ್ಜಿಸುವುದು, ಲಿಂಗದೊಡನೆ ಉಂಬುವುದು,
ಅಗ್ನಿಯೆ ಅಂಗವಾಗಿಪ್ಪುದೆ ಪ್ರಸಾದಿಸ್ಥಲ.
ಇನ್ನು ಪ್ರಾಣಲಿಂಗಿಸ್ಥಲದ ವಿವರವು:
ಸುಗುಣ ದುರ್ಗುಣ ಉಭಯವನತಿಗಳೆದು
ಸುಖ ದುಃಖ ಸ್ತುತಿ ನಿಂದೆ ಶತ್ರು ಮಿತ್ರಾದಿಗಳೆಲ್ಲರಂ ಸಮಾನಂಗಂಡು
ವಾಯುವೆ ಅಂಗವಾಗಿಪ್ಪುದೆ ಪ್ರಾಣಲಿಂಗಿಸ್ಥಲ.
ಇನ್ನು ಶರಣಸ್ಥಲದ ವಿವರವು:
ಸತಿಪತಿಭಾವ ಅಂಗಲಿಂಗವಾಗಿಪ್ಪುದು,
ಪಂಚೇಂದ್ರಿಯಸುಖ ನಾಸ್ತಿಯಾಗಿಪ್ಪುದು,
ಆಕಾಶವೆ ಅಂಗವಾಗಿಪ್ಪುದು, ಇದು ಶರಣಸ್ಥಲವು.
ಸಾಕ್ಷಿ:
"ಪತಿರ್ಲಿಂಗಂ ಸತೀ ಚಾsಹಂ ಇತಿ ಯುಕ್ತಂ ಸನಾತನಃ |
ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||"
ಇನ್ನು ಐಕ್ಯಸ್ಥಲದ ವಿವರವು:
ಅರಿಷಡ್ವರ್ಗಂಗಳಿಲ್ಲದಿಹರು, ನಿರ್ಭಾವದಲ್ಲಿಹರು,
ಷಡೂರ್ಮಿಗಳಿಲ್ಲದಿಹರು, ಅಷ್ಟವಿಧಾರ್ಚನೆ ಇಲ್ಲದಿಹರು,
ಉರಿಯುಂಡ ಕರ್ಪುರದ ಹಾಗೆ ಇಹರು,
ಆತ್ಮನೆ ಅಂಗವಾಗಿಪ್ಪುದು ಐಕ್ಯಸ್ಥಲವು.
ಸಾಕ್ಷಿ:
"ಷಡೂರ್ಮಿಯೋಗಷಡ್ವರ್ಗಂ ನಾಸ್ತಿ ಚಾಷ್ಟವಿಧಾರ್ಚನಂ |
ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಸಯೋಗವತ್||"
ಹೀಗೆ ಗಣಂಗಳು ನಡೆದ ಮಾರ್ಗದಲ್ಲಿ ನಡೆದಡೆ
ಅಂದೇನೊ ಇಂದೇನೊ ?
ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು
ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ
Art
Manuscript
Music
Courtesy:
Transliteration
Aṣṭāvaraṇagaḷu yārige sādhyavāyittendaḍe
hēḷihe kēḷiraṇṇa:
Guru sādhyavāyittu gurubhaktaṅge;
liṅga sādhyavāyittu nīlalōcanetāyige;
jaṅgamavu sādhyavāyittu basavēśvaradēvarige;
pādōdaka sādhyavāyittu vēmanārādhyaṅge;
prasāda sādhyavāyittu bibbibācayyaṅge;
vibhūti sādhyavāyittu ōhilayyagaḷige;
rudrākṣi sādhyavāyittu cēramarāyage;
pan̄cākṣari sādhyavāyittu ajagaṇṇaṅge.
Innu ṣaṭsthalada nirṇayava kēḷi:
Bhaktasthala basavaṇṇaṅgāyittu;Māhēśvarasthala maḍivāḷayyaṅgāyittu;
prasādisthala cennabasavaṇṇaṅgāyittu;
prāṇaliṅgisthala sid'dharāmayyaṅgāyittu;
śaraṇasthala prabhudēvarigāyittu;
aikyasthala ajagaṇṇaṅgāyittu.
Innu ṣaḍusthalada vivaravaṁ pēḷvenu.-
Bhaktasthalada vivaravu:
Guruliṅgajaṅgamavu ondeyendu kaṇḍu
sadācāradalli naḍevanu,
trikāla majjanava nīḍuvanu,
lān̄chanadhārigaḷa kaṇḍaḍe vandaneya māḍuvanu,
āpyāyanakke annava nīḍuvanu,
jaṅgamakke prati uttarava koḍanu.
Pr̥thvi aṅgavāgippude bhaktisthalavu.
Sākṣi:Majjanaṁ tu trikālēṣu śucipākasamarpitaṁ |
bhavisaṅgaparityāgaṁ ityētē bhaktikāraṇaṁ ||
sadācārē śivabhaktiḥ liṅgajaṅgamēkādhikaṁ |
lān̄chanēna śaraṇyaṁ ca bhaktisthalaṁ mahōttamaṁ ||
innu māhēśvarasthalada vivaravu:
Parastrī paraninde paradravya parahinse anr̥ta
ivu pan̄camahāpātakavu,
iva biṭṭu liṅganiṣṭheyalli irdu
jalave aṅgavāgippude māhēśvarasthalavu.
Sākṣi:
Parastrīyaṁ parārthaṁ ca varjitō bhāvaśud'dhimān |
liṅganis'saṅgiyuktātmā mahēśasthalamuttamaṁ ||
innu prasādisthalada vivara:Liṅgakke arpisiduda liṅganenahininde svīkarisuvudu,
anarpitava varjisuvudu, liṅgadoḍane umbuvudu,
agniye aṅgavāgippude prasādisthala.
Innu prāṇaliṅgisthalada vivaravu:
Suguṇa durguṇa ubhayavanatigaḷedu
sukha duḥkha stuti ninde śatru mitrādigaḷellaraṁ samānaṅgaṇḍu
vāyuve aṅgavāgippude prāṇaliṅgisthala.
Innu śaraṇasthalada vivaravu:
Satipatibhāva aṅgaliṅgavāgippudu,
pan̄cēndriyasukha nāstiyāgippudu,
ākāśave aṅgavāgippudu, idu śaraṇasthalavu.
Sākṣi:
Patirliṅgaṁ satī cāshaṁ iti yuktaṁ sanātanaḥ |Pan̄cēndriyasukhaṁ nāsti śaraṇasthalamuttamaṁ ||
innu aikyasthalada vivaravu:
Ariṣaḍvargaṅgaḷilladiharu, nirbhāvadalliharu,
ṣaḍūrmigaḷilladiharu, aṣṭavidhārcane illadiharu,
uriyuṇḍa karpurada hāge iharu,
ātmane aṅgavāgippudu aikyasthalavu.
Sākṣi:
Ṣaḍūrmiyōgaṣaḍvargaṁ nāsti cāṣṭavidhārcanaṁ |
nirbhāvaṁ śivaliṅgaikyaṁ śikhikarpūrasayōgavat||
hīge gaṇaṅgaḷu naḍeda mārgadalli naḍedaḍe
andēno indēno?
Intī aṣṭāvaraṇagaḷa, ṣaḍusthalada mārgavanu
ennoḷu aruhidāta, nam'ma śāntakūḍalasaṅgamadēva