Index   ವಚನ - 26    Search  
 
ಘಟಾಕಾಶ ಮಹಾಕಾಶ ಮಹದಾಕಾಶ ಆವುವೆಂದಡೆ: ಘಟಾಕಾಶವೆ ಇಷ್ಟಲಿಂಗಕ್ಕೆ ಮನೆಯಾಗಿಪ್ಪುದು, ಜಿಹ್ವೆಯೆ ತಾಯಾಗಿಪ್ಪುದು, ನೇತ್ರವೆ ತಂದೆಯಾಗಿಪ್ಪುದು, ದ್ವಿಕರ್ಣಂಗಳೆ ಅಣ್ಣತಮ್ಮಂದಿರಾಗಿಪ್ಪವು, ಹಸ್ತಪಾದಂಗಳೆ ಕುಟುಂಬವಾಗಿಪ್ಪವು, ಚಿತ್ತಶುದ್ಧವೆ ಅರಮನೆಯಾಗಿಪ್ಪುದು. ಇವರು ಇಷ್ಟಲಿಂಗಕ್ಕೆ ಉಪಚಾರವ ಮಾಡುತ್ತಿಹರು. ಸಾಕ್ಷಿ: "ಮಾತಾ ಜಿಹ್ವಾ ಪಿತಾ ಚಕ್ಷುಃ ದ್ವಿಕರ್ಣಶ್ಚ ಸಹೋದರಂ | ಹಸ್ತಪಾದ ಕುಟುಂಬೇನ ಚಿತ್ತಶುದ್ಧೇ ಯಥಾ ಮಠಃ ||" ಇನ್ನು ಮಠಾಕಾಶವೆ ಪ್ರಾಣಲಿಂಗಕ್ಕೆ ಮನೆಯಾಗಿಪ್ಪುದು, ಸತ್ಯವೆ ತಾಯಾಗಿಪ್ಪುದು, ಜ್ಞಾನವೆ ತಂದೆಯಾಗಿಪ್ಪುದು, ಧರ್ಮವೇ ಅಣ್ಣತಮ್ಮಂದಿರಾಗಿಪ್ಪರು, ದಯವೆ ಗೆಳೆಯನಾಗಿಪ್ಪನು, ಶಾಂತಿಯೆ ಸ್ತ್ರೀಯಾಗಿಪ್ಪಳು, ಕ್ಷಮೆಯೇ ಪುತ್ರರಾಗಿಪ್ಪರು, ಇವರು ಬಂಧುಗಳಾಗಿ ಪ್ರಾಣಲಿಂಗಕ್ಕೆ ಉಪಚರಿಸುತ್ತಿಹರು. ಸಾಕ್ಷಿ: "ಸತ್ಯಂ ಮಾತಾ ಪಿತಾ ಜ್ಞಾನಂ ಧರ್ಮೋ ಭ್ರಾತಾ ದಯಾ ಸಖಾ | ಶಾಂತಿಃ ಪತ್ನೀ ಕ್ಷಮಾ ಪುತ್ರಾಃ ಷಡೇತೇ ಮಮ ಬಾಂಧವಾಃ ||" ಮಹದಾಕಾಶವೆ ಭಾವಲಿಂಗಕ್ಕೆ ಮನೆಯಾಗಿಪ್ಪುದು, ತೃಪ್ತಿಯೆ ತಾಯಾಗಿಪ್ಪಳು, ಆನಂದವೆ ತಂದೆಯಾಗಿಪ್ಪನು, ಸಂತೋಷವೆ ಅಣ್ಣತಮ್ಮಂದಿರಾಗಿಪ್ಪರು, ಹರುಷಾಬ್ಧಿಯೆ ಸ್ತ್ರೀಯಾಗಿಪ್ಪಳು, ಸದ್ಭಾವವೆ ಮಕ್ಕಳಾಗಿಪ್ಪರು, ಇವರು ಭಾವಲಿಂಗಕ್ಕೆ ಉಪಚರಿಸುತ್ತಿಹರು. ಘಟಾಕಾಶವೆಂದಡೆ ಜೀವಾತ್ಮ, ಮಠಾಕಾಶವೆಂದಡೆ ಅಂತರಾತ್ಮ, ಮಹದಾಕಾಶವೆಂದಡೆ ಪರಮಾತ್ಮ, ಚೆನ್ನಂಗಿಬೇಳೆಗಿಂದ ಸಣ್ಣನಾಗಿಪ್ಪ ನೇತ್ರವು ತ್ರಿವಿಧಲಿಂಗವು. ಈ ತ್ರಿವಿಧಾಕಾಶವನೊಳಕೊಂಡ ಭೇದವ ನಮ್ಮಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ