ಗುರುಭಕ್ತರಾದವರು ಶಿವಭಕ್ತರಾದವರ ದಣಿವ ಕಂಡು
ಸುಮ್ಮನಿರಲಾಗದು.
ಅದೇನು ಕಾರಣವೆಂದಡೆ :
ಒಬ್ಬ ಗುರುವಿನ ಮಕ್ಕಳಾದ ಮೇಲೆ
ತನಗೆ ಗುರುವು ಕೊಟ್ಟ ದ್ರವ್ಯವ ಸವೆಸಲೇಬೇಕು.
ಮತ್ತೆ ಪ್ರಪಂಚಿನ ತಂದೆ ಒಬ್ಬನಿಗೆ ಮಕ್ಕಳೈವರು.
ಅವರು ತಂದೆಯ ಬದುಕು ನ್ಯಾಯದಿಂದ ಸರಿಮಾಡಿಕೊಂಬರು.
ಈ ದೃಷ್ಟವ ಕಂಡು ನಮಗೆ ಭಕ್ತಿಪಕ್ಷವಾಗದಿದ್ದಡೆ
ಈ ಪ್ರಪಂಚರಿಗಿಂತ ಕಡಿಮೆಯಾಯಿತಲ್ಲಾ ಗುರುವೆ ಎನ್ನ ಬಾಳುವೆ.
ಒಂದಗಳ ಕಂಡರೆ ಕಾಗೆ ಕರೆಯದೆ ತನ್ನ ಬಳಗವನೆಲ್ಲವ?
ಒಂದು ಗುಟುಕ ಕಂಡರೆ ಕೋಳಿ
ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಇಂತಪ್ಪ ದೃಷ್ಟವ ಕಂಡು ನೋಡಿ
ಆ ಭಕ್ತರಿಗೆ ಭಕ್ತಿಪಕ್ಷವಾಗದಿದ್ದಡೆ
ಆ ಕಾಗೆ ಕೋಳಿಗಿಂದ ಕರಕಷ್ಟವಾಯಿತಲ್ಲಾ ಎನ್ನ ಬಾಳುವೆ.
ಭಕ್ತರಿಗೆ ಕಡಬಡ್ಢಿ ಕೊಟ್ಟ ಮೇಲೆ
ಕೊಟ್ಟರೆ ಲೇಸು, ಕೊಡದಿರ್ದಡೆ ಲೇಸು.
ಬೇಡಲಾಗದು, ಅದೇನು ಕಾರಣವೆಂದಡೆ
ಅವರಲ್ಲಿ ಗುರು-ಲಿಂಗ-ಜಂಗಮವು ಇಪ್ಪರಾಗಿ.
ಗುರುವಿನ ದ್ರವ್ಯ ಗುರುವಿಗೆ ಮುಟ್ಟಿತಲ್ಲದೆ,
ಮತ್ತೆ ನ್ಯಾಯಕಿಕ್ಕಿ ಅನ್ಯರಿಗೆ ಹೇಳಿ
ಅವರ ಭಂಗವ ಮಾಡಿಸಿದರೆ ಗುರುಹಿರಿಯರೆಂಬರು,
ನಮ್ಮ ಮನೆಯ ಬೆಕ್ಕು ನಾಯಿಗೆ ಮನ್ನಿಸಬೇಕಲ್ಲದೆ,
ಮನ್ನಿಸದಿದ್ದಡೆ ಅವರಿಗೆ ಅವರ ತಕ್ಕ ಶಿಕ್ಷೆಯಾದೀತು.
ಮತ್ತೆ ಭಕ್ತಾಭಕ್ತರಿಗೆ ಕೊಟ್ಟು ಕೊಂಬ ಉದ್ಯೋಗವಾಗಲಿ
ಆಚಾರ-ವಿಚಾರವಾಗಲಿ, ಬೈದರಾಗಲಿ, ಹೊಯ್ದರಾಗಲಿ
ಮತ್ತೆ ಏನಾದರು ತೊಡಕು ಬರಲಿ
ತಮ್ಮ ಮನೆಯೊಳಗೆ ಸುಮ್ಮನೆ ಇರುವುದು ಲೇಸು.
ಮತ್ತೆ ಭಕ್ತಗಣಂಗಳು ಇದ್ದಲ್ಲಿಗೆ ಇಬ್ಬರೂ ಹೋಗಿ
ತಮ್ಮಲ್ಲಿ ಇರುವ ಸ್ಥಿತಿಯ ಹೇಳಿ,
ಅವರು ಹೇಳಿದ ಹಾಗೆ ಕೇಳಿಕೊಂಡು ಇಪ್ಪುದೇ ಲೇಸು.
ಇಲ್ಲಿ ಭಕ್ತಗಣಂಗಳು ಒಪ್ಪಿದರೆ ಅಲ್ಲಿ ಒಪ್ಪುವರು.
ಕಡ ಒಯ್ದದ್ದು ಕೊಡದಿದ್ದಡೆ,
ಮತ್ತೆ ಭಕ್ತರು ಬೈದರೆ ನಮಗೆ ದುಮ್ಮಾನವಾಗುವದು ಸ್ವಾಮಿ.
ಅನ್ಯರು ಒಯ್ದ ದ್ರವ್ಯ ಮುಳುಗಿದಡೆ ಚಿಂತೆಯಿಲ್ಲವು,
ಭವಿಜನಾತ್ಮರು ಬೈದಡೆ ಎಳ್ಳಷ್ಟು ಸಿಟ್ಟಿಲ್ಲವು.
ಇಂಥ ಬುದ್ಧಿಯ ಕೊಡಬಹುದೆ ಲಿಂಗವೆ!
ನೀವು ಬೇಡಿದುದನೀವೆನೆಂಬ
ನಿಮ್ಮ ತಮ್ಮಟ ಬಿರಿದನು ಕೇಳಿ ಬೇಡಿಕೊಂಬೆನು.
ಏನೆಂದಡೆ :
ಉದ್ಯೋಗ ವ್ಯಾಪಾರ ಮಾಡುವಲ್ಲಿ
ಹುಸಿ [ಬರೆಹವ] ಮಾಡಿ ಒಬ್ಬರ ಮನೆಯ ದ್ರವ್ಯವ
ಒಬ್ಬರ ಮನೆಗೆ ಹಾಕಿ,
ಅಹುದಲ್ಲದ ಮಾಡುವದ ಬಿಡಿಸು.
ನಿಮ್ಮ ನೆನಹಿನೊಳಗೆ ಇಟ್ಟ ಮೇಲೆ ಮತ್ತೆ ರೊಕ್ಕ ಕೊಟ್ಟು
ಉದ್ಯೋಗವ ಮಾಡದಿರಯ್ಯ.
ಈ ರೊಕ್ಕವು ತಂದೆ-ಮಕ್ಕಳಿಗೆ ವಿರೋಧ.
ಕೊಂಬಲ್ಲಿ ವಿರೋಧ, ಕೊಟ್ಟಲ್ಲಿ ವಿರೋಧ.
ಇಂತಿದ ತಿಳಿದ ಮೇಲೆ ಹೇಸಿಕೆಯಾಯಿತ್ತು.
ರೊಕ್ಕವ ಕೊಡಬೇಡ, ಸಿರಿತನ ಬೇಡ,
ಬಡತನ ಕೊಡಿರಯ್ಯ.
ಹಿರಿತನ ಬೇಡ ಕಿರಿತನ ಕೊಡಿರಯ್ಯ.
ಒಡೆತನ ಬೇಡ ಬಂಟತನ ಕೊಡಿರಯ್ಯ.
ಭಕ್ತಗಣಂಗಳ ಸೇವೆಯ ಕೊಡಿರಯ್ಯ.
ಭಕ್ತರ ನೆರೆಯಲ್ಲಿ ಇರಿಸಯ್ಯ.
ಅವರು ಒಕ್ಕುಮಿಕ್ಕ ಪ್ರಸಾದವ ಕೊಡಿಸಯ್ಯ.
ಅವರು ತೊಟ್ಟ ಮೈಲಿಗೆಯ ಕೊಡಿಸಯ್ಯ.
ಅವರ ಬಾಗಿಲ ಕಾಯಿಸಯ್ಯ.
ಅವರ ಬಂಟತನ ಮಾಡಿಸಯ್ಯ.
ಅವರ ಸಂಗ ಎಂದೆಂದಿಗೂ ಅಗಲಿಸದಿರಯ್ಯ.
ನಾಲಗೆಯಲ್ಲಿ ಪಂಚಾಕ್ಷರವ ನಿಲಿಸಯ್ಯ.
ನೇತ್ರದೊಳಗೆ ನಿಮ್ಮ ರೂಪವ ನಿಲಿಸಯ್ಯ.
ಇಷ್ಟನು ಕೊಡದಿರ್ದಡೆ ನೀವು ಬೇಡಿದ್ದನೀವನೆಂಬ
ನಿಮ್ಮ ತಮ್ಮಟ ಬಿರಿದು ಕೇಳಿ ನಮ್ಮ ಗಣಂಗಳು
ಹಿಡಿತಿಯ ಹಿಡಿದಾರಯ್ಯ !
ಎಂದಾತ ನಮ್ಮ ಶಾಂತಕೂಡಲಸಂಗಮದೇವ