Index   ವಚನ - 29    Search  
 
ಶಿವಭಕ್ತ ಆವ ಊರೊಳಗಿದ್ದರೇನು? ಆವ ಕೇರಿಯಲಿದ್ದರೇನು? ಹೊಲಗೇರಿಯೊಳಗಿದ್ದರೇನು? ಶಿವಭಕ್ತನಿದ್ದುದೇ ಕೈಲಾಸ! ಆತನ ಮನೆಯೇ ಶಿವನ ಅರಮನೆ! ಆತನ ಮನೆಯ ಸುತ್ತಮುತ್ತಲಿದ್ದ ಲೋಕವೆಲ್ಲ ಶಿವಲೋಕ! ಸಾಕ್ಷಿ : "ಚಾಂಡಾಲವಾಟಿಕಾಯಾಂ ಚ ಶಿವಭಕ್ತಃ ಸ್ಥಿತೋ ಯದಿ | ಅತ್ರಾSಪಿ ಶಿವಲೋಕಃ ಸ್ಯಾತ್ ತದ್ಗೃಹಂ ಶಿವಮಂದಿರಂ ||" ಎಂದುದಾಗಿ, ಇಂತಪ್ಪ ಶಿವಭಕ್ತನ ಅಂಗಳವ ಕಂಡಡೆ ಕೋಟಿ ಬ್ರಹ್ಮಹತ್ಯ ಕೋಟಿ ಶಿಶುಹತ್ಯ ಇವೆಲ್ಲ ಅಳಿದುಹೋಗುವವು. ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದವರಿಗೆ ಅಷ್ಟೈಶ್ವರ್ಯ ಅಷ್ಟಮಹಾಸಿದ್ಧಿ ಫಲವು ತಪ್ಪದು. ಅವರ ಒಕ್ಕುಮಿಕ್ಕ ಪ್ರಸಾದವ ಕೊಂಡಡೆ ಸದ್ಯೋನ್ಮುಕ್ತರಪ್ಪುದು ತಪ್ಪದು. ಇಂತಪ್ಪ ಶಿವಭಕ್ತರಿಗೆ ಏನೆಂದು ಉಪಮಿಸುವೆನಯ್ಯ ಆತನು ಮಹಾದೇವನಲ್ಲದೆ ಬೇರುಂಟೆ? ಆತ ಅಗಮ್ಯ ಅಗೋಚರ ಅಪ್ರಮಾಣ ಆನಂದಮಹಿಮನು. ಅಂತಪ್ಪ ಸದ್ಭಕ್ತನ ಶ್ರೀಚರಣವ ಎನ್ನೊಳಗೆ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ