Index   ವಚನ - 31    Search  
 
ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ: ಸದ್ಯೋಜಾತಮುಖದಿಂದಾದ ಪೃಥ್ವಿ ಲಿಂಗಕ್ಕೆ ಪತ್ರಿ ಪುಷ್ಪ ಬೇಕೆಂದು ಅನಂತ ಪತ್ರಿ ಪುಷ್ಪಗಳಿಂದ ಅರ್ಚಿಸುತ್ತಿಹುದು. ವಾಮದೇವಮುಖದಿಂದಾದಪ್ಪು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂದು ಸಪ್ತಸಮುದ್ರ ದಶಗಂಗೆಗಳ ಕುಂಭವ ಮಾಡಿ, ಕೆರೆ ಬಾವಿಗಳ ಪಂಚಪಾತ್ರೆಯ ಮಾಡಿ, ಮಜ್ಜನ ನೀಡಿಸುತ್ತಿಹುದು. ಅಘೋರಮುಖದಿಂದಾದ ಅಗ್ನಿ ಲಿಂಗಕ್ಕೆ ಧೂಪ ದೀಪ ಆರತಿಗಳಾಗಬೇಕೆಂದು, ಕಾಷ್ಠದಲ್ಲಿ ಪಾಷಾಣದಲ್ಲಿ ಬೆಳಗುತ್ತಿಹುದು. ತತ್ಪುರುಷಮುಖದಿಂದಾದ ವಾಯು ಲಿಂಗಕ್ಕೆ ಜಪವ ಮಾಡುತ್ತಿಹುದು. ಈಶಾನ್ಯ ಮುಖದಿಂದಾದ ಆಕಾಶ ಲಿಂಗಕ್ಕೆ ಭೇರಿ ಮೊದಲಾದ ನಾದಂಗಳ ಬಾರಿಸುತ್ತಿಹುದು. ಗೋಪ್ಯಮುಖದಿಂದಾದ ಆತ್ಮನು ಲಿಂಗಕ್ಕೆ ಸಿಂಹಾಸನವಾಗಿರ್ಪುದು. ಮನ ಚಕ್ಷುವಿನಿಂದಾದ ಚಂದ್ರ-ಸೂರ್ಯರು ದೀವಿಗೆಯಾಗಿಹರು. ಇಂತಪ್ಪ ಘನವಸ್ತು ಎರಡಾಗಿ ತನ್ನ ವಿನೋದಕ್ಕೆ ಅರ್ಪಿಸಿಕೊಂಬಾತನು ತಾನೇ, ಅರ್ಪಿಸುವಾತನು ತಾನೇ. ಇಂತಪ್ಪ ಘನಲಿಂಗವು ಕರಸ್ಥಲದೊಳಗೆ ಚುಳುಕಾಗಿ ನಿಂದ ನಿಲವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ