ಶ್ರೀಗುರುವಿನ ಕರ ಕಂಗಳು ಹೃದಯಮಧ್ಯದಲ್ಲಿ
ಉದಯವಾದ ಇಷ್ಟಮಹಾಲಿಂಗವೆ ಪರಮಪಾವನವಯ್ಯ.
ಆ ಮಹಾಲಿಂಗವೆ ಪರಮಪ್ರಕಾಶವಯ್ಯ.
ಆ ಮಹಾಲಿಂಗವೆ ಪರಂಜ್ಯೋತಿಸ್ವರೂಪನಯ್ಯ.
ಆ ಮಹಾಲಿಂಗವೆ ಪರತತ್ವಬ್ರಹ್ಮವಯ್ಯ.
ಆ ಮಹಾಲಿಂಗವೆ ಪರಮಾಚಾರಸ್ವರೂಪನಯ್ಯ.
ಆ ಮಹಾಲಿಂಗವೆ ಪರಮನಿಷ್ಕಳಂಕನಯ್ಯ.
ಆ ಮಹಾಲಿಂಗವೆ ಚಿದ್ಘನವಸ್ತುವಯ್ಯ.
ಆ ಮಹಾಲಿಂಗವೆ ಚಿನ್ಮಯಸ್ವರೂಪನಯ್ಯ
ಆ ಮಹಾಲಿಂಗವೆ ಚಿದಾನಂದಮೂರ್ತಿಯಯ್ಯ
ಆ ಮಹಾಲಿಂಗವೆ ಚಿತ್ಪ್ರಕಾಶಮೂರ್ತಿಯಯ್ಯ.
ಆ ಮಹಾಲಿಂಗವೆ ಚಿದ್ರೂಪಮೂರ್ತಿಯಯ್ಯ.
ಆ ಮಹಾಲಿಂಗವೆ ಸಹಜಸನ್ಮಾರ್ಗಸ್ವರೂಪನಯ್ಯ.
ಆ ಮಹಾಲಿಂಗವೆ ಸತ್ತುಚಿತ್ತಾನಂದಮೂರ್ತಿಯಯ್ಯ.
ಆ ಮಹಾಲಿಂಗವೆ ಸರ್ವಸಾಕ್ಷಿಕಮೂರ್ತಿಯಯ್ಯ.
ಆ ಮಹಾಲಿಂಗವೆ ಸರ್ವಚೈತನ್ಯಮೂರ್ತಿಯಯ್ಯ.
ಆ ಮಹಾಲಿಂಗವೆ ಸರ್ವಾಂತರ್ಯಾಮಿ ನೋಡ!
ಇಷ್ಟಮಹಾಚಿದ್ಘನಲಿಂಗವೆ ಸರ್ವತತ್ವಂಗಳಿಗೆ
ಮೂಲಾಧಾರಮೂರ್ತಿ ನೋಡ, ಸಂಗನಬಸವೇಶ್ವರ