Index   ವಚನ - 12    Search  
 
ಜಂಗಮವೆ ಮಂತ್ರಮೂರ್ತಿ ನೋಡಯ್ಯ. ಜಂಗಮವೆ ಮೂಲಪ್ರಣವಸ್ವರೂಪಮೂರ್ತಿ ನೋಡಯ್ಯ. ಜಂಗಮವೆ ತ್ರಿಯಾಕ್ಷರ-ಪಂಚಾಕ್ಷರ-ಷಡಕ್ಷರಂಗಳಿಗೆ ಮೂಲಾಧಾರಮೂರ್ತಿ ನೋಡಯ್ಯ. ಜಂಗಮವೆ ಸಪ್ತಕೋಟಿ ಮಹಾಮಂತ್ರಂಗಳಿಗೆ ಜನನಿಜನಕ ನೋಡಯ್ಯ. ಜಂಗಮವೆ ಆದಿಪುರಾತನಗಣ ತಿಂಥಿಣಿಗೆ ಪರಮಾಮೃತಸುಧೆ ನೋಡಯ್ಯ. ಜಂಗಮವೆ ಅನಾದಿ ಪುರಾತನಗಣಸಮೂಹಕ್ಕೆ ಮಹಾಪರುಷಸ್ವರೂಪ ನೋಡಯ್ಯ. ಜಂಗಮವೆ ನೂತನ ಪುರಾತನ ಗಣಂಗಳಿಗೆ ಮಹಾಕಲ್ಯಾಣಸ್ವರೂಪ ನೋಡಯ್ಯ. ಜಂಗಮವೆ ಶಿವಲಾಂಛನ ಪಂಚಮುದ್ರಾಂಕಿತ ನೋಡಯ್ಯ. ಜಂಗಮವೆ ಕೃಪಾಸಮುದ್ರ ನೋಡಯ್ಯ. ಜಂಗಮವೆ ಬತ್ತೀಸ ಕಳಾಭರಿತಮೂರ್ತಿ ನೋಡಯ್ಯ. ಜಂಗಮವೆ ಷಡ್ವಿಧಶೀಲವ್ರತಾಚಾರಪೂರಿತ ನೋಡಯ್ಯ. ಜಂಗಮವೆ ಬಸವ ಚನ್ನಬಸವ ನೀಲಲೋಚನೆ ಅಕ್ಕಮಹಾದೇವಿ ಮೊದಲಾದ ಪ್ರಮಥಗಣಂಗಳ ಪ್ರಾಣಲಿಂಗಮೂರ್ತಿ ನೋಡಯ್ಯ. ಜಂಗಮವೆ ದಿಗಂಬರ ನಿರಾವಯಮೂರ್ತಿ ನೋಡಯ್ಯ. ಜಂಗಮವೆ ನಿಷ್ಪ್ರಪಂಚ ನಿರಾಲಂಬ ನಿರ್ಗುಣ ನಿರಾತಂಕ ನಿಶ್ಚಿಂತ ನಿಷ್ಕಾಮ ನಿಶ್ಶೂನ್ಯ ನಿರಂಗ ನಿರಂಜನಮೂರ್ತಿ ಪರಮಾನಂದ ಪರಿಪೂರ್ಣ ಮಹಾಂತ ತಾನೆ ನೋಡ ಸಂಗನಬಸವೇಶ್ವರ