Index   ವಚನ - 17    Search  
 
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ನಿಜವೀರಪರಾಕ್ರಮ ಉಂಟಾಗುವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಪ್ರಮಥಗಣಂಗಳ ಸದ್ಭಕ್ತಿ ದಾಸೋಹ ದೊರವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಸದಾಚಾರ ಲಿಂಗನಡೆ-ಲಿಂಗನುಡಿ ದೊರವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಕಾಲ ಕಾಮರು ಹೊದ್ದಲಮ್ಮರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಉರಗ ವೃಶ್ಚಿಕ ವ್ಯಾಘ್ರ ಭಲ್ಲೂಕ ಗಜ ಗರುಡ ಸಿಂಹ ಶಾರ್ದೂಲ ಸೋಂಕಲಮ್ಮವಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಕುಷ್ಠರೋಗ ಮೊದಲಾಗಿ ಸಮಸ್ತವ್ಯಾಧಿಗಳು ಪಾವನಸ್ವರೂಪವಾಗುವವಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಸತ್ಕ್ರಿಯಾ ಸಮ್ಯಜ್ಞಾನದ ಚಿತ್ಕಾಂತಿ ಹೆಚ್ಚುವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಮಹಾಪಾತಕಂಗಳು ಬಿಟ್ಟೋಡುವವಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ರುದ್ರಲೋಕದ ರುದ್ರಗಣಂಗಳೆಲ್ಲ ಶಿಖಿಕರ್ಪೂರ ಬೆರೆದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಶಿವಲೋಕದ ಶಿವಗಣಂಗಳೆಲ್ಲ ಕ್ಷೀರ ಕ್ಷೀರ ಬೆರೆದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ದೇವಲೋಕದ ಶಿವಗಣಂಗಳು, ನಾಗಲೋಕದ ನಾಗಗಣಂಗಳು, ಶಾಂಭವಲೋಕದ ಶಾಂಭವಗಣಂಗಳೆಲ್ಲ ಜ್ಯೋತಿ ಜ್ಯೋತಿ ಬೆರದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಮರ್ತ್ಯ ಲೋಕದ ಮಹಾಗಣಂಗಳೆಲ್ಲ ನಿಶ್ಚಿಂತ-ನಿಷ್ಕಾಮ-ನಿಷ್ಪ್ರಪಂಚಿಗಳಾಗಿ ಬಯಲು ಬಯಲು ಬೆರೆದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿತ್ಯನಿಷ್ಕಲಲಿಂಗ ತಾನೆ ನೋಡ ಸಂಗನಬಸವೇಶ್ವರ