ಶ್ರೀಗುರುಲಿಂಗಜಂಗಮದ ನೋಟಪರುಷ ಪ್ರಸಾದದಿಂದ
ಸಮಸ್ತಲೋಕದ ಮನು-ಮುನಿ-ಋಷಿಗಳೆಲ್ಲ
ಪರಮ ಸುಖಿಗಳಾದರಯ್ಯ.
ಶ್ರೀಗುರುಲಿಂಗಜಂಗಮದ ಹಸ್ತಪರುಷದಿಂದ ಪವಿತ್ರವಾದ
ಶುದ್ಧಪ್ರಸಾದದಿಂದ ತನುವಿನ ಕಾಮವಿಕಾರವಳಿವುದಯ್ಯ.
ಶ್ರೀಗುರುಲಿಂಗಜಂಗಮದ ಸಿದ್ಧಪ್ರಸಾದದಿಂದ
ಮನದ ಕಾಂಕ್ಷೆ ಹರಿವುದಯ್ಯ,
ಶ್ರೀಗುರುಲಿಂಗಜಂಗಮದ ಪ್ರಸಿದ್ಧ ಪ್ರಸಾದದಿಂದ
ಭಾವದ ಭ್ರಮೆಯಳಿದು ಕೆಡುವುದಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದಿ ಪ್ರಸಾದದಿಂದ
ಪ್ರಾಣನ ಪ್ರಪಂಚು ನಷ್ಟವಾಗುವುದಯ್ಯ.
ಶ್ರೀಗುರುಲಿಂಗಜಂಗಮದ ಘನಾಪ್ಯಾಯನ ಪ್ರಸಾದದಿಂದ
ಇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾಗುವವಯ್ಯ.
ಶ್ರೀಗುರುಲಿಂಗಜಂಗಮದ ಸಮಯಪ್ರಸಾದದಿಂದ
ವಿಷಯಂಗಳೆಲ್ಲ ಲಿಂಗವಿಷಯಂಗಳಾಗುವವಯ್ಯ.
ಶ್ರೀಗುರುಲಿಂಗಜಂಗಮದ ಪಂಚೇಂದ್ರಿಯವಿರಹಿತಪ್ರಸಾದದಿಂದ
ಕರಣಂಗಳೆಲ್ಲ ಲಿಂಗಕರಣಂಗಳಾಗುವವಯ್ಯ.
ಶ್ರೀಗುರುಲಿಂಗಜಂಗಮದ ಕರಣಚತುಷ್ಟಯವಿರಹಿತಪ್ರಸಾದ,
ಸಮತಾಪ್ರಸಾದ, ಸದ್ಭಾವಪ್ರಸಾದ, ಜ್ಞಾನಪ್ರಸಾದದಿಂದ
ಸರ್ವಸಂಗ ಪರಿತ್ಯಾಗರಾಗಿ, ಬಯಲನೆ ಹಾಸಿ, ಬಯಲನೆ ಹೊದ್ದು,
ಬಯಲನೆ ಅರ್ಚಿಸಿ, ಬಯಲನೆ ಭೋಗಿಸಿ
ಬಸವ ಮೊದಲಾದ ಪ್ರಮಥಗಣಂಗಳೆಲ್ಲ
ಬಯಲೊಳಗೆ ಮಹಾಬಯಲಾದರು ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ ಪರಮಾಮೃತಸುಧೆ
ಜ್ಯೋತಿರ್ಮಯಲಿಂಗ ನೋಡ, ಸಂಗನಬಸವೇಶ್ವರ
Art
Manuscript
Music
Courtesy:
Transliteration
Śrīguruliṅgajaṅgamada nōṭaparuṣa prasādadinda
samastalōkada manu-muni-r̥ṣigaḷella
parama sukhigaḷādarayya.
Śrīguruliṅgajaṅgamada hastaparuṣadinda pavitravāda
śud'dhaprasādadinda tanuvina kāmavikāravaḷivudayya.
Śrīguruliṅgajaṅgamada sid'dhaprasādadinda
manada kāṅkṣe harivudayya,
śrīguruliṅgajaṅgamada prasid'dha prasādadinda
bhāvada bhrameyaḷidu keḍuvudayya.
Śrīguruliṅgajaṅgamada prasādi prasādadinda
prāṇana prapan̄cu naṣṭavāguvudayya.
Śrīguruliṅgajaṅgamada ghanāpyāyana prasādadindaIndriyaṅgaḷella liṅgēndriyaṅgaḷāguvavayya.
Śrīguruliṅgajaṅgamada samayaprasādadinda
viṣayaṅgaḷella liṅgaviṣayaṅgaḷāguvavayya.
Śrīguruliṅgajaṅgamada pan̄cēndriyavirahitaprasādadinda
karaṇaṅgaḷella liṅgakaraṇaṅgaḷāguvavayya.
Śrīguruliṅgajaṅgamada karaṇacatuṣṭayavirahitaprasāda,
samatāprasāda, sadbhāvaprasāda, jñānaprasādadinda
sarvasaṅga parityāgarāgi, bayalane hāsi, bayalane hoddu,
bayalane arcisi, bayalane bhōgisi
basava modalāda pramathagaṇaṅgaḷella
Bayaloḷage mahābayalādaru nōḍa.
Śrīguruliṅgajaṅgamada prasādave paramāmr̥tasudhe
jyōtirmayaliṅga nōḍa, saṅganabasavēśvara