Index   ವಚನ - 19    Search  
 
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಅನಾದಿ ಮಹಾಪ್ರಭು ಶ್ರೀಗುರುಲಿಂಗಜಂಗಮದ ಚರಣೋದ್ಧೊಳನವೆ ಚಿದ್ಬ್ರಹ್ಮ ಚಿದೈಶ್ವರ್ಯ ನೋಡ. ಶ್ರೀಗುರುಲಿಂಗಜಂಗಮದ ಕ್ರಿಯಾಚಕ್ಷುವಿನ ಕ್ರಿಯಾ ಪ್ರಕಾಶವೆ ಕ್ರಿಯಾಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಜ್ಞಾನಚಕ್ಷುವಿನ ಜ್ಞಾನಪ್ರಕಾಶವೆ ಜ್ಞಾನಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಚಕ್ಷುವಿನ ಮಹಾಜ್ಞಾನಪ್ರಕಾಶವೆ ಮಹಾಜ್ಞಾನಭಸಿತವಾಗಿರ್ಪುದಯ್ಯ. ಇಂಥ ಚಿತ್ಪ್ರಕಾಶಸ್ವರೂಪವಾದ ಚಿದ್ಭಸಿತವ ಅನಾದಿ ಬಸವದಂಡಪ್ರಮಥರು ತಮ್ಮ ಗೋಪ್ಯಮುಖದಲ್ಲಿ ಸಕಲಕ್ರಿಯೆಗಳ ಆಚರಿಸುತ್ತಿರಲು ಆಗ ಶಿವನು ತನ್ನ ಪಂಚಮುಖದಿಂದ ಪಂಚವರ್ಣದ ಗೋವ ನಿರ್ಮಿಸಿ, 'ಎಲೈ ಎನ್ನ ಚಿಚ್ಚೈತನ್ಯಮೂರ್ತಿ ಬಸವದಂಡನಾಯಕರೆ ಈ ಪಂಚಗೋವುಗಳ ಈರೇಳುಲೋಕಕ್ಕೆ ಪಾವನಸ್ವರೂಪವ ಮಾಡಿ, ನಿಮ್ಮ ಶರಣಗಣಂಗಳಿಗರ್ಪಿತವಾಗುವಂತೆ ಮಾಡಿರಯ್ಯ.' ಎಂದು ಅಭಿವಂದಿಸಲು, ಆಗ ಬಸವದಂಡಪ್ರಮಥರು ಆ ಗೋವಿನ ಸಗಣವ ಕ್ರಿಯಾಗ್ನಿಯಿಂದ ದಹಿಸಿ, ಶ್ರೀಗುರುಲಿಂಗಜಂಗಮದ ಚಿತ್ಪ್ರಭೆಯ ವೇಧಿಸಿ ಸಕಲಲೋಕಂಗಳಿಗೆ ಸಕಲ ಮುನಿಜನಕ್ಕೆಲ್ಲ ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತ, ಪಾಪಹರಭಸಿತವೆನಿಸಿಕೊಟ್ಟರು ನೋಡ. ಆ ಗೋವಿನ ಜಲಮಲ ವೀರ್ಯದಿಂದ ಭೂಮಿಯ ಸಮ್ಮಾರ್ಜನೆಗೆ ಯೋಗ್ಯವೆಂದೆನಿಸಿದರಯ್ಯ. ಆ ಗೋವಿನ ಕುಚಕ್ಷೀರವ ಸರ್ವಲೋಕಂಗಳಿಗೆ ಪಂಚಾಮೃತವೆಂದೆನಿಸಿದರಯ್ಯ. ಆ ಗೋವಿನ ಪುತ್ರನಿಂದ ಸಕಲಪ್ರಾಣಿಗಳು ಬದುಕುವಂತೆ ಮಾಡಿದರಯ್ಯ. ಆ ಗೋವಿನ ಮಾಂಸವ ದುರಾಚಾರಭವಿಜನ್ಮಾತ್ಮರು ಭುಂಜಿಸುವಂತೆ ಮಾಡಿದರಯ್ಯ. ಆ ಗೋವಿನ ಚರ್ಮವ ಶಿವಗಣಂಗಳ ಪಾದರಕ್ಷೆಯೆಂದೆನಿಸಿದರು ನೋಡಯ್ಯ. ಇತ್ತಲಾಗಿ ಸಕಲಪ್ರಮಥಗಣಂಗಳೆಲ್ಲ ಶ್ರೀ ಬಸವೇಶ್ವರಸ್ವಾಮಿಗಳ ಚಿತ್ಪ್ರಕಾಶಭಸಿತವ ಬೆಸಗೊಂಡು ಆ ವಿಭೂತಿಯ ಶ್ರೀ ಗುರುಲಿಂಗಜಂಗಮದ ದೀಕ್ಷಾಜಲ-ಶಿಕ್ಷಾಜಲದಿಂದ ಸಮ್ಮಿಶ್ರವ ಮಾಡಿ, ಇಪ್ಪತ್ತೊಂದು ದೀಕ್ಷಾಸ್ವರೂಪವಾದ ಮಹಾಪ್ರಣಮವ ಸ್ಥಾಪಿಸಿ, ಸಕಲಾಚಾರಕ್ರಿಯೆಗಳಿಗೆ ಶುಭತಿಲಕವಿದೆ ಚಿದ್ವಿಭೂತಿಯಿದೆಂದು ನಿರಂತರ ಸ್ನಾನ ಧೂಳನ-ಧಾರಣವ ಮಾಡಿದರು ನೋಡ. ಅದರಿಂ ಮೇಲೆ ಆ ಗೋವಿನ ಕುಚಕ್ಷೀರವ ಈ ಭಸಿತದಿಂದ ಪಾವನವ ಮಾಡಿ, ಪರಮಾಮೃತವೆನಿಸಿ, ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ಪರಮಾಮೃತ ಶೇಷಪ್ರಸಾದವ ನಿಜನಿಷ್ಠೆಯಿಂದ ಲಿಂಗಾರ್ಪಿತವ ಮಾಡಿದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶಭಸಿತವ ಬಹಿಷ್ಕರಿಸಿ ಸಕಲಪ್ರಮಥಗಣಂಗಳಿಗೆ ಪರಮಪದ ಮೋಕ್ಷದ ಕಣಿಯೆಂದು ಬೋಧಿಸಿದಂಥ ಬಸವದಂಡನಾಥನ ಚರಣಕ್ಕೆ ನಮೋ ನಮೋ ಎಂಬೆ ನೋಡ ಸಂಗನಬಸವೇಶ್ವರ.