Index   ವಚನ - 22    Search  
 
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪರಾತ್ಪರಬ್ರಹ್ಮ ಪ್ರಭು ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಹರನ ತ್ರಿವಿಧನೇತ್ರದಿಂದುದಯವಾದ ತ್ರಿವಿಧವರ್ಣದ ಬಿಂದುಗಳ ಅನಾದಿಚಿತ್ಪ್ರಭು ಬಸವೇಶ್ವರಸ್ವಾಮಿಗಳು, ಆ ಬಿಂದುಗಳ ತಮ್ಮ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ಚಿದ್ಬಿಂದು ಚಿನ್ಮಂತ್ರ ಮಣಿಮಾಲಿಕೆಯೆಂದು ತತ್ವಸ್ಥಾನಂಗಳಲ್ಲಿ ಧರಿಸಿ, ಮಹಾಪ್ರಭು ನಿರಂಜನ ಜಂಗಮಕ್ಕೆ ಇಪ್ಪತ್ತೊಂದು ಲಕ್ಷ ಮಣಿಗಳಿಂದ ಶೂನ್ಯಸಿಂಹಾಸನಮಂಟಪವ ರಚಿಸಿ, ಆ ಸಿಂಹಾಸನದ ಮೇಲೆ ಮಹಾಪ್ರಭು ನಿರಂಜನ ಜಂಗಮವ ಮೂರ್ತವ ಮಾಡಿಸಿ, ಮಹಾವೈಭವದಿಂದ ಸಕಲಮಹಾಪ್ರಮಥಗಣಂಗಳಿಗೆ ಆ ಚಿದ್ಬಿಂದುಗಳಮಲದಲ್ಲಿ ಅನಾದಿಗುರು, ಅನಾದಿಪ್ರಣಮವ ಸಂಬಂಧವ ಮಾಡಿ, ಮುಖಂಗಳಲ್ಲಿ ಅನಾದಿಲಿಂಗ ಪಾದೋದಕ ಪ್ರಸಾದವ ಸಂಬಂಧವ ಮಾಡಿ, ನಾಳದಲ್ಲಿ ಅನಾದಿಜಂಗಮ ಚಿತ್ಪ್ರಕಾಶ ಚಿದ್ಭಸಿತವ ಸಂಬಂಧವ ಮಾಡಿ, ಮಹಾ ಸಂತೋಷವೆಂಬ ಹರುಷಾನಂದ ಜಲವುಕ್ಕಿ, ಕಡಗ-ಕಂಠಮಾಲೆ-ಕರ್ಣಾಭರಣ-ಹಾರ-ಹೀರಾವಳಿಗಳ ಮಾಡಿ ಧರಿಸಿ, ಚಿಂತಾಮಣಿಯೆಂದು ಪ್ರಮಥಗಣ, ರುದ್ರಗಣ, ಷೋಡಶಗಣ, ತೇರಸಗಣ, ದಶಗಣ, ಮರ್ತ್ಯಲೋಕದ ಮಹಾಗಣ ಸಮೂಹಕ್ಕೆಲ್ಲ ಒರದು ಬೋಧಿಸಿದರು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಚಿನ್ಮಂತ್ರ ಮಾಲಿಕೆ ಪರಮಚಿಂತಾಮಣಿ ನೋಡ ಸಂಗನಬಸವೇಶ್ವರ