Index   ವಚನ - 24    Search  
 
ಶ್ರೀ ಮಹಾಚಿನ್ಮಯ ಚಿಂತಾಮಣಿ ಮಂತ್ರಮಾಲಿಕೆಯ ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ಧರಿಸಿದಾತಂಗೆ ಬ್ರಹ್ಮಹತ್ಯ, ಪುಶುಹತ್ಯ, ಶಿಶುಹತ್ಯ, ಸ್ತ್ರೀಹತ್ಯ ಭ್ರೂಣಹತ್ಯ, ಮಾತೃದ್ರೋಹ, ಪಿತೃದ್ರೋಹ ಮೊದಲಾದ ಮಹಾಪರಮಪಾತಕಂಗಳು ದೂರವಾಗುವವಯ್ಯ. ಶ್ರೀ ಮಹಾರುದ್ರಾಕ್ಷಿಯ ಶ್ರೀಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಗಳ ಸಮರ್ಪಿಸಿ, ಅವರ ಕರುಣಕಟಾಕ್ಷ ನಿರ್ಮಾಲ್ಯ ಮಂತ್ರಮಾಲಿಕೆ ಪ್ರಸಾದ ರುದ್ರಾಕ್ಷಿಯ ಬೆಸಗೊಂಡಾತಂಗೆ ಇಹಲೋಕದಲ್ಲಿ ಪರಶಿವಲಿಂಗಭೋಗಿಯಾಗಿ ಪರಲೋಕದಲ್ಲಿ ಪರಶಿವಜಂಗಮದೊಳಗೆ ಐಕ್ಯತ್ವ ದೊರವುದು ನೋಡ. ಶ್ರೀ ಮಹಾರುದ್ರಾಕ್ಷಿಯ ಗುರುವಚನೋಕ್ತಿಯಿಂದ ಅದರಾದಿ ಅಂತ್ಯವ ತಿಳಿದು, ಆಯಾಯ ಸ್ಥಾನಂಗಳಲ್ಲಿ ಆಯಾಯ ಮಂತ್ರಸ್ಮರಣೆಗಳಿಂದ ಆಯಾಯ ಮುಖಗಳ ಆಯಾಯ ವರ್ಣಗಳ ತಿಳಿದು ಹೆರೆಹಿಂಗದೆ ಧರಿಸಿದ ಮಹಾಭಕ್ತಜಂಗಮಶರಣಗಣಂಗಳೆಲ್ಲ ಜ್ಯೋತಿಮಯವಪ್ಪುದು ತಪ್ಪದು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷ ಚಿತ್ಪ್ರಭಾಪುಂಜರಂಜಿತವಾದ ಶ್ರೀ ಮಹಾರುದ್ರಾಕ್ಷಿಯೆ ಪರಮ ಚಿದೈಶ್ವರ್ಯ ನೋಡ ಸಂಗನಬಸವೇಶ್ವರ