Index   ವಚನ - 25    Search  
 
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಮಂತ್ರಸ್ವರೂಪ ಅನಾದಿ ಮಹಾಪ್ರಭು ಶ್ರೀ ಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಮಹಾಪ್ರಣಮವೆ ನಿಜವಸ್ತು ನೋಡ. ಆ ಮಹಾಪ್ರಣಮದಿಂದುದಯವಾದ ತ್ರಿಯಕ್ಷರ-ಪಂಚಾಕ್ಷರ-ಷಡಕ್ಷರಂಗಳೆ ಮಹಾಮಂತ್ರಂಗಳು ನೋಡ. ಆ ಮಹಾಮಂತ್ರಂಗಳೆ ಸಕಲ ಉಪಮಂತ್ರಂಗಳಿಗೆ ಮಾತೆ ಪಿತ ನೋಡ. ಆ ಮಹಾಮಂತ್ರಂಗಳೆ ಸಕಲ ಶಾಸ್ತ್ರಾಗಮ ಪುರಾಣಂಗಳಿಗೆ ಜನನಿ ಜನಕ ನೋಡ. ಆ ಮಹಾಮಂತ್ರವೆ ನಿಷ್ಕಲ ನಿಶ್ಯೂನ್ಯ ನಿರಂಜನ, ಗುರು-ಲಿಂಗ-ಜಂಗಮ, ಪಾದೋದಕ-ಪ್ರಸಾದ, ಚಿದ್ವಿಭೂತಿ ರುದ್ರಾಕ್ಷಿಗಳಿಗೆಲ್ಲ ಮೂಲಬೀಜಾಂಕುರ ನೋಡ. ಆ ಮಹಾಮಂತ್ರವೆ ಅನಾದಿ ಶರಣನ ಚಿದೈಶ್ವರ್ಯ ಚಿದಾಭರಣ ನೋಡ. ಆ ಮಹಾಮಂತ್ರವೆ ಸಕಲಾಚಾರ ಕ್ರಿಯಾಜ್ಞಾನಂಗಳಿಗೆ ಸಂಜೀವನ ನೋಡ, ಸಂಗನಬಸವೇಶ್ವರ