Index   ವಚನ - 38    Search  
 
ಅಯ್ಯ, ಒಂದು ಜೀವಾತ್ಮನೆ ನಾಲ್ಕು ತೆರನಾಗಿರ್ಪುದಯ್ಯ. ಅದೆಂತೆಂದಡೆ : ಒಂದು ಜೀವನೆ ಅಂಡಜಪ್ರಾಣಿಯಾಗಿರ್ಪುದಯ್ಯ. ಮತ್ತೊಂದು ಜೀವನೆ ಪಿಂಡಜಪ್ರಾಣಿಯಾಗಿರ್ಪುದಯ್ಯ. ಮಿಗಿಲೊಂದು ಜೀವನೆ ಉದ್ಬಿಜಪ್ರಾಣಿಯಾಗಿರ್ಪುದಯ್ಯ. ಮತ್ತೊಂದು ಜೀವನೆ ಜರಾಯುಜಪ್ರಾಣಿಯಾಗಿರ್ಪುದಯ್ಯ. ಈ ಚತುರ್ವಿಧ ಜೀವನೊಳಗೆ ಏಳುಲಕ್ಷ ಮಲಜೀವನಯ್ಯ, ಏಳುಲಕ್ಷ ಜಡಜೀವನಯ್ಯ, ಏಳುಲಕ್ಷ ಕುಜೀವನಯ್ಯ, ಏಳುಲಕ್ಷ ದುರ್ಜೀವನಯ್ಯ, ಏಳುಲಕ್ಷ ಕಪಟಜೀವನಯ್ಯ, ಏಳುಲಕ್ಷ ಸಂಚಲಜೀವನಯ್ಯ, ಏಳುಲಕ್ಷ ವಂಚಕಜೀವನಯ್ಯ, ಏಳುಲಕ್ಷ ನಿರ್ಮಲಜೀವನಯ್ಯ, ಏಳುಲಕ್ಷ ಅಜಡಜೀವನಯ್ಯ, ಏಳುಲಕ್ಷ ಸುಜೀವನಯ್ಯ, ಏಳುಲಕ್ಷ ಸಂಜೀವನಯ್ಯ, ಏಳುಲಕ್ಷ ಪರಮಜೀವನಯ್ಯ. ಈ ತೆರನಾಗಿ ಎಂಬತ್ತುನಾಲ್ಕುಲಕ್ಷ ಜೀವಪ್ರಾಣಿಗಳೆಲ್ಲ ಶಿವನ ಪೂರ್ವಭಾಗದ ಪ್ರವೃತ್ತಿಮಾರ್ಗದ ಕರ್ಮೇಂದ್ರಿಯ, ಜ್ಞಾನೇಂದ್ರಿಯವೆಂಬ ದ್ವಾದಶೇಂದ್ರಿಯಂಗಳಲ್ಲಿ ಜೀವಿಸುತಿರ್ಪವಯ್ಯ. ಆ ದ್ವಾದಶ ಜೀವನ ವರ್ತನಾಭೇದದಿಂದ ಒಂದು ಜೀವನೆ ಹನ್ನೆರಡು ತೆರನಾಗಿರ್ಪುದಯ್ಯ. ಅದರ ಗುಣಭೇದವೆಂತೆಂದಡೆ : ಉಚ್ಫಿಷ್ಟವ ತಿಂದು ಬದುಕುವ ಜೀವನೆ ಮಲಜೀವನೆನಿಸುವುದಯ್ಯ. ಮಾಂಸಭಕ್ಷಣೆಯಿಂದ ಬದುಕುವ ಜೀವನೆ ಜಡಜೀವನೆನಿಸುವುದಯ್ಯ. ಚಾಡಿ ಕ್ಷುದ್ರತನದಿಂದ ಒಡಲ ಹೊರವ ಜೀವನೆ ದುರ್ಜೀವನೆನಿಸುವುದಯ್ಯ. ಕಡಿದು, ಹೊಡದು, ಬಡಿದು, ಬಂಧಿಸಿ ಒಡಲ ಹೊರವ ಜೀವನೆ ಕಪಟಜೀವನೆನಿಸುವುದಯ್ಯ. ಗಾರುಡಿಗವಿದ್ಯದಿಂದ ಒಡಲಹೊರವಜೀವನೆ ಸಂಚಲಜೀವನೆನಿಸುವುದಯ್ಯ. ದೇಶಕ್ಕೊಂದು ಭಾಷೆ, ದೇಶಕ್ಕೊಂದು ವೇಷವ ಧರಿಸಿ, ಅಜಾತತನದಿಂದ ಒಡಲ ಹೊರವ ಜೀವನೆ ವಂಚಕಜೀವನೆನಿಸುವುದಯ್ಯ. ಷಟ್ಕೃಷಿ ವ್ಯಾಪಾರದೊಳಗೆ ಆವುದಾದರೂ ಒಂದು ವ್ಯವಹಾರವ ಮಾಡಿ, ಸತ್ಯದಿಂದ ಬಾಳುವವನೆ ನಿರ್ಮಲಜೀವನೆನಿಸುವುದಯ್ಯ. ಆವ ಮತವಾದರೇನು? ಆವ ಜಾತಿಯಾದರೇನು? ಮಲಮಾಯಾ ಸಂಸಾರಬಂಧಮಂ ತ್ಯಜಿಸಿದ ಅಷ್ಟಾಂಗಯೋಗಾಭ್ಯಾಸಿಯೆ ಅಜಡಜೀವನೆನಿಸುವುದಯ್ಯ. ಅಷ್ಟಾಂಗಯೋಗವ ತ್ಯಜಿಸಿ ಶ್ರೀಗುರುಪರಮಾರಾಧ್ಯನ ಉಪಾವಸ್ತೆಯಂ ಮಾಡುವವನೆ ಸುಜೀವನೆನಿಸುವುದಯ್ಯ. ಮಹಾಚಿದ್ಘನ ಗುರುದೇವನ ಪ್ರತ್ಯಕ್ಷವಮಾಡಿಕೊಂಡು ಘನಗುರುಭಕ್ತಿಯಲ್ಲಿ ನಿಷ್ಠೆಯುಳ್ಳಾತನೆ ಸಜ್ಜೀವನೆನಿಸುವುದಯ್ಯ. ಶ್ರೀಮದ್ಘನ ಗುರುವ ಮೆಚ್ಚಿಸಿ ಇಷ್ಟ-ಪ್ರಾಣ-ಭಾವಲಿಂಗವ ಪಡದಾತನೆ ಪರಾತ್ಪರಮಜೀವನೆನಿಸುವುದಯ್ಯ. ಇಂತೀ ಜೀವನ ಬುದ್ಧಿಯ ಗುರುಕಟಾಕ್ಷದಿಂದ ನಿವೃತ್ತಿಯಮಾಡಿ, ತ್ರಿವಿಧಾಂಗವೆಲ್ಲ ದೀಕ್ಷಾತ್ರಯಂಗಳಿಂದ ಶುದ್ಧಪ್ರಸಾದವಾಗಿ, ಭಾವತ್ರಯಂಗಳೆಲ್ಲ ಮೋಕ್ಷತ್ರಯಂಗಳಿಂದ ಪ್ರಸಿದ್ಧಪ್ರಸಾದವಾಗಿ, ಸತ್ಯವಾಣಿ, ಸತ್ಯಪ್ರಾಣಿ, ಸತ್ಯಮಾಣಿ, ಉಳಿದವಯವಂಗಳೆಲ್ಲ ಸತ್ಯವನೆ ಹಾಸಿ, ಸತ್ಯವನೆ ಹೊದ್ದು, ಸತ್ಯ ಕಾಯಕವ ಮಾಡಿ, ಸತ್ಯ ಭಿಕ್ಷವ ಬೇಡಿ, ಮರ್ತ್ಯದಲ್ಲಿ ಬಂದು ಬಾರದಂತೆ, ಸತ್ಯಸದಾಚಾರದಿಂದ ನಡೆ ನುಡಿಸಂಪನ್ನರೆ ಕೇವಲ ಪರಶಿವಗಣಂಗಳು ನೋಡ ಸಂಗನಬಸವೇಶ್ವರ