ಅಯ್ಯ, ಪರಮ ಪತಿವ್ರತೆಗೆ
ಹರಗಣ ಸಾಕ್ಷಿಯಾಗಿ ಕಂಕಣವ ಕಟ್ಟಿದ ಪುರುಷಂಗೆ
ತನ್ನ ತನುಮನವ ಮೀಸಲ ಮಾಡಿ,
ತನ್ನ ಪಿತ-ಮಾತೆ-ಪುತ್ರ-ಮಿತ್ರರ ಸಂಗವ ಸೋಂಕದೆ,
ಅವರೊಡವೆಗಿಚ್ಛೈಸಿ ನಡೆನುಡಿಗಳಾಲಿಸದೆ,
ತನ್ನ ರಮಣನ ದ್ರವ್ಯಾಭರಣವ ಹಾರೈಸಿ,
ಆತನ ನುಡಿಯೆ ಮಹಾಪ್ರಸಾದವೆಂದು ಪ್ರತಿನುಡಿಯ ನುಡಿಯದೆ,
ಸರ್ವಾವಸ್ಥೆಯಲ್ಲಿ ಆ ರಮಣನ ರತಿಸಂಯೋಗಾನುಸಂಧಾನದಿಂದ
ಎರಡಳಿದಿರುವ ಸತ್ಯಾಂಗನೆಯಂತೆ
ಶ್ರೀ ಗುರುವಿನ ಕರಗರ್ಭಮಧ್ಯದಲ್ಲಿ ಜನಿತವಾದ ಲಿಂಗಭಕ್ತಗಣ
ಸತಿ ಸುತ ಪಿತ ಮಾತೆ ಬಂಧು ಬಳಗ
ಒಡಹುಟ್ಟಿದವರು ಮೊದಲಾಗಿ
ಪರಶಿವಲಿಂಗ ಜಂಗಮತೀರ್ಥಪ್ರಸಾದ ಮಂತ್ರದಲ್ಲಿ ಮುಳುಗಿ,
ಲೋಕದ ಶೈವಮಾರ್ಗಿಗಳಂತೆ
ಹಲವು ಕ್ಷೇತ್ರ, ಹಲವು ತೀರ್ಥ, ಹಲವು ನೇಮ ವ್ರತಗಳಿಗೆ
ಅಡಿಯಿಡದೆ
ವಾಚಕ-ಮಾನಸ-ಕಾಯಕ ಮೊದಲಾದ ಸಮಸ್ತತತ್ವಂಗಳ
ಸ್ವಪಾಕವ ಮಾಡಿ ನಿಷ್ಕಳಂಕ ಪರಶಿವಲಿಂಗಜಂಗಮಕ್ಕೆ ಸಮರ್ಪಿಸಿ,
ಅವರೊಕ್ಕುಮಿಕ್ಕ ಹರುಷಾನಂದ ಮಹಾಪ್ರಸಾದದಲ್ಲಿ ಸಂತೃಪ್ತನಾಗಿ,
ಇಷ್ಟಲಿಂಗಬಾಹ್ಯವಾದ ಜಡಶೈವ ನಡೆನುಡಿಗಳ
ಆಲಿಸದಿಪ್ಪುದೆ ಏಕಾಗ್ರಚಿತ್ತದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಷಟ್ಸ್ಥಲನಾಯಕ
ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, parama pativratege
haragaṇa sākṣiyāgi kaṅkaṇava kaṭṭida puruṣaṅge
tanna tanumanava mīsala māḍi,
tanna pita-māte-putra-mitrara saṅgava sōṅkade,
avaroḍavegicchaisi naḍenuḍigaḷālisade,
tanna ramaṇana dravyābharaṇava hāraisi,
ātana nuḍiye mahāprasādavendu pratinuḍiya nuḍiyade,
sarvāvastheyalli ā ramaṇana ratisanyōgānusandhānadinda
eraḍaḷidiruva satyāṅganeyante
śrī guruvina karagarbhamadhyadalli janitavāda liṅgabhaktagaṇa
sati suta pita māte bandhu baḷaga
oḍahuṭṭidavaru modalāgi
paraśivaliṅga jaṅgamatīrthaprasāda mantradalli muḷugi,
lōkada śaivamārgigaḷante
Halavu kṣētra, halavu tīrtha, halavu nēma vratagaḷige
aḍiyiḍade
vācaka-mānasa-kāyaka modalāda samastatatvaṅgaḷa
svapākava māḍi niṣkaḷaṅka paraśivaliṅgajaṅgamakke samarpisi,
avarokkumikka haruṣānanda mahāprasādadalli santr̥ptanāgi,
iṣṭaliṅgabāhyavāda jaḍaśaiva naḍenuḍigaḷa
ālisadippude ēkāgracittadīkṣe.
Intuṭendu śrīguru niṣkaḷaṅka ṣaṭsthalanāyaka
cannabasavarājēndranu nirlajjaśāntaliṅgadēśikōttamaṅge
nirūpamaṁ koḍutirdaru nōḍa
saṅganabasavēśvara.