Index   ವಚನ - 63    Search  
 
ಅಯ್ಯ, ಸತ್ಯಸದಾಚಾರಲಿಂಗ ಧರಿಸಿದ ಲಿಂಗಭಕ್ತಂಗೆ ದೀಕ್ಷಾಗುರುವೆ ಕುಲದೈವ, ಶಿಕ್ಷಾಗುರುವೆ ಮನೆದೈವ, ಜ್ಞಾನಗುರುವೆ ಮನದ ಮಧ್ಯದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗವೆಂದು ಕುಲದುಂಬಿ, ಮನೆದುಂಬಿ, ಮನದುಂಬಿ, ಮತ್ತೊಂದು ಇತರ ವಾದಿಗಳಂತೆ, ಅನ್ಯಾರ್ಚನೆ, ಅನ್ಯಶಾಸ್ತ್ರ, ಅನ್ಯಮಂತ್ರ, ಅನ್ಯಪಾಕವ ಮುಟ್ಟದೆ, ಸ್ವಪಾಕವ ಮಾಡಿ ಹರಗಣಗುರುಚರಪರಕ್ಕೆ ಸಮರ್ಪಿಸಿ, ಬಂದ ಬರವ, ನಿಂದ ನಿಲುಕಡೆಯ ತಿಳಿದು, ತನುವೆಲ್ಲ ದೀಕ್ಷಾಗುರುವಿನ ದೀಕ್ಷಾಪಾದೋದಕ ಶುದ್ಧಪ್ರಸಾದವೆಂದರಿದ ನಿಜವೆ ಆದಿಪ್ರಸಾದಿಸ್ಥಲ ನೋಡ. ಮನವೆಲ್ಲ ಶಿಕ್ಷಾಗುರುವಿನ ಶಿಕ್ಷಾಪಾದೋದಕ ಸಿದ್ಧಪ್ರಸಾದವೆಂದರಿದ ನಿಜವೆ ಅಂತ್ಯಪ್ರಸಾದಿಸ್ಥಲ ನೋಡ. ಭಾವವೆಲ್ಲ ಜ್ಞಾನಗುರುವಿನ ಜ್ಞಾನಪಾದೋದಕ ಪ್ರಸಿದ್ಧಪ್ರಸಾದವೆಂದರಿದ ನಿಜವೆ ಸೇವ್ಯಪ್ರಸಾದಿಸ್ಥಲ ನೋಡ. ಇಂತು ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಸ್ವರೂಪವಾದ ಲಿಂಗಜಂಗಮದ ಪಾದೋದಕ ಪ್ರಸಾದ ಒದವಿದಲ್ಲಿ ಆಚರಣೆ, ಸಾಮಾನ್ಯದಲ್ಲಿ ಸಂಬಂಧವಿಟ್ಟುಕೊಂಡು ಕೊಟ್ಟು ಕೊಳಬಲ್ಲಾತನೆ ನಿಚ್ಚಪ್ರಸಾದಿಯಯ್ಯ. ಲಿಂಗಜಂಗಮದ ಪಾದೋದಕ ಪ್ರಸಾದವನುಳಿದು ಜಂಗಮಲಿಂಗದ ಪ್ರಸಾದ ಪಾದೋದಕ ಪ್ರಸನ್ನ ಪ್ರಸಾದವ ದಿವಾರಾತ್ರಿಗಳೆನ್ನದೆ ಆಚರಣೆಯ ಪ್ರಾಣವಾಗಿ ಕೊಟ್ಟು ಕೊಳಬಲ್ಲಾತನೆ ಅಚ್ಚಪ್ರಸಾದಿಯಯ್ಯ. ಇವರಿಬ್ಬರಲ್ಲಿ ಅತಿಭೃತ್ಯನಾಗಿ, ಇವರಿಬ್ಬರಾಚರಣೆಯಲ್ಲಿ ದೃಢಚಿತ್ತದಿಂದ ಕೊಟ್ಟು ಕೊಳಬಲ್ಲಾತನೆ ಸಮಯಪ್ರಸಾದಿ ನೋಡ. ಇಂತು ಸರ್ವಾಚಾರ ಸಂಪತ್ತಿನಾಚರಣೆಯ ಸಾಕಾರಲೀಲೆ, ಅರ್ಪಿತಾವಧಾನ, ಚೇತನಪರಿಯಂತರವು ಆಚರಿಸುವಂಥದೆ ದೃಢವ್ರತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.