Index   ವಚನ - 68    Search  
 
ಅಯ್ಯ, ಶ್ರೀಗುರುಲಿಂಗಜಂಗಮ ಕರುಣ ಕಟಾಕ್ಷೆಯಿಂದ ಶ್ರುತಿ ಗುರು ಶ್ವಾನುಭಾವವಿಡಿದು ಹಿಡಿದಂಥ ಸನ್ಮಾರ್ಗಾಚಾರಕ್ರಿಯೆಗಳ ಅಪಮೃತ್ಯು ಬಂದು ತಟ್ಟಿ ಪ್ರಾಣತ್ಯಾಗವ ಮಾಡಿದಡು ಅಂಜಿ ಅಳುಕದೆ, ಪರಮ ಪತಿವ್ರತತ್ವದಿಂದ ಹಿಂದು ಮುಂದಣ ಪುಣ್ಯಪಾಪವನೆಣಿಸದೆ, ಇಂತು ಶ್ರೀಗುರುವಾಕ್ಯವ ನಿಜನೈಷ್ಠೆಯಿಂದರಿದು, ನಿಜವೀರಶೈವ ಸದ್ಭಕ್ತಾಚಾರಲಿಂಗಮುಖದಿಂದ ಬಂದ ಸ್ವಪಾಕವಾದಡು ಸರಿಯೆ, ಷಣ್ಮತದಿಂದ ಧನ-ಧಾನ್ಯರೂಪಿನಿಂದ ಬಂದ ಪದಾರ್ಥವಾದಡು ಸರಿಯೆ, ಭಕ್ತಾಶ್ರಯದಲ್ಲಿ ಸ್ವಪಾಕವ ಮಾಡಿ, ಸಂಬಂಧಾಚರಣೆಗಳಿಂದ ಪವಿತ್ರಸ್ವರೂಪ ಪಾದೋದಕ ಪ್ರಸಾದವೆನಿಸಿ, ನಿರ್ವಂಚಕತ್ವದಿಂದ ಸಂಚಲಚಿತ್ತವನುಳಿದು, ಮಂತ್ರಸ್ಮರಣೆಯಿಂದ ಸರ್ವಾಚಾರ ಸಂಪತ್ತಿನಾಚರಣೆಯನೊಳಕೊಂಡು, ಸಮಸ್ತಲೋಕ ಪಾವನಮೂರ್ತಿ ನಿಷ್ಕಲ ಪರಶಿವಲಿಂಗಜಂಗಮಕ್ಕೆ ಕೊಟ್ಟುಕೊಂಬ ಸದ್ಭಕ್ತ ಜಂಗಮದ ಚರಣಕಮಲಧೂಳನವೆ ದ್ವಿತೀಯ ಕೈಲಾಸ ಶಿವಮಂದಿರವೆಂದು ಹಿಂದು-ಮುಂದಣ ಆಶೆ-ಆಮಿಷದ ಭ್ರಾಂತು-ಭ್ರಮೆಗಳನುಳಿದು, ಧ್ಯಾನ-ಮೌನ-ನೇಮ-ನಿತ್ಯ-ಸತ್ಯ-ಸದ್ಭಾವವೆಂಬ ಷಡ್ಗುಣೈಶ್ವರ್ಯ ಸಂಪದವ ನಿಷ್ಕಲಪರತತ್ವಲಿಂಗದಿಂ ಪಡದು, ಆ ಲಿಂಗದೊಡನೆ ಭೋಗಿಸಿ, ನಿಷ್ಕಲ ಪರತತ್ವಮೂರ್ತಿ ತಾನಾದ ನಿಜಮೋಕ್ಷದಿರವೆ ಸದ್ಯೋನ್ಮುಕ್ತಿದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ, ಸಂಗನಬಸವೇಶ್ವರ.