Index   ವಚನ - 67    Search  
 
ಅಯ್ಯ, ಸತ್ಯ ಸದಾಚಾರ ಸದ್ಭಕ್ತಿ ಜ್ಞಾನ ವೈರಾಗ್ಯ ಸತ್ಕ್ರಿಯಾ ಸತ್ಕಾಯಕ ಸತ್ಪಾತ್ರಭಿಕ್ಷ ಲೀಲೆಯ ಧರಿಸಿ, ಲೋಕಪಾವನಾರ್ಥವಾಗಿ ಇಚ್ಛೆಯ ನುಡಿಯದೆ, ನಡೆನುಡಿ ಹೀನವಾದ ಸೂತಕ ಪಾತಕರ ಸಂಗವ ಹೊದ್ದದೆ, ಗುರುಮಾರ್ಗಾಚಾರಕ್ಕೆ ಕುಂದು ಕೊರತೆಗಳ ತಾರದೆ, ಸನ್ಮಾರ್ಗದಲ್ಲಾಚರಿಸುವ ಗುರುಲಿಂಗಜಂಗಮ ಸದ್ಭಕ್ತಿ ಚಾರಿತ್ರವನುಳ್ಳ ಶಿವಶರಣ ಗಣಂಗಳಲ್ಲಿ ಕುಂದು ನಿಂದ್ಯಗಳ ಕಲ್ಪಿಸದೆ ಎಚ್ಚರದಪ್ಪಿದಲ್ಲಿ ಬಹುಪರಾಕು ಸ್ವಾಮಿ ಶರಣಗಣಂಗಳು ಹೋದ ಮಾರ್ಗವಿದಲ್ಲವೆಂದು ಭೃತ್ಯಭಕ್ತಿಯಿಂದ ಹೇಳಿ, ಅಜ್ಞಾನ-ಅಕ್ರಿಯ-ಅನಾಚಾರವೆಂಬ ಮಾಯಾಶರಧಿಯಲ್ಲಿ ಮುಳುಗಿ ಹೋಗುವ ಇಷ್ಟಲಿಂಗಧಾರಕ ಭಕ್ತಗಣಂಗಳ ಕಂಡು ಅಗಸ ತನ್ನ ಮಡಿ ಮೈಲಿಗೆ ಹೊರುವ ಕತ್ತೆಯು ಜಿಹ್ವಾಲಂಪಟ ಗುಹ್ಯಲಂಪಟದಿಚ್ಛೆಗೆ ಹೋಗಿ ಹಳ್ಳ ಕೊಳ್ಳ ಕೆರೆ ಬಾವಿಯೊಳಗೆ ಬಿದ್ದು ಹೋಗುವದ ಕಂಡು ಕಿವಿಯ ಹಿಡಿದು ಎಳದುಕೊಂಡೋಪಾದಿಯಲ್ಲಿ ಹಸ್ತ-ಪಾದವ ಹಿಡಿದು ಕಡೆಗೆಳೆದು ಶ್ರುತಿ-ಗುರು-ಸ್ವಾನುಭಾವವ ತೋರಿ, ಮತ್ತವರ ಕರುಣವ ಹಡದು, ಏಕಮಾರ್ಗದಲ್ಲಿ ಆಚರಿಸಿ, ನಿಷ್ಕಲಪರಶಿವಲಿಂಗದಲ್ಲಿ ಶಿಖಿ-ಕರ್ಪುರದಂತೆ ರತಿ ಸಂಯೋಗವುಳ್ಳಂಥಾದೆ ಮನೋರ್ಲಯದೀಕ್ಷೆ. ಇಂತುಟೆಂದು ಶ್ರೀಗುರು ನಿರಾಲಂಭಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.