Index   ವಚನ - 70    Search  
 
ಅಯ್ಯ, ಷೋಡಶಕಮಲಂಗಳಲ್ಲಿ ನೆಲಸಿರ್ಪ ಲಿಂಗಗಳಭಿದಾನವ ಕರುಣಿಸಬೇಕಯ್ಯ ಶ್ರೀಗುರನಾಥನೆ' 'ಕೇಳಯ್ಯ ಎನ್ನ ಕಂಗಳ ಹೃದಯದಲ್ಲಿ ನೆಲಸಿರ್ಪ ವರಕುಮಾರ ಶಿಷ್ಯೋತ್ತಮನೆ' ಸುಚಿತ್ತಕಮಲದಲ್ಲಿ ಆಚಾರಲಿಂಗವಾಗಿ ನೆಲಸಿರ್ಪರಯ್ಯ. ಸುಬುದ್ಧಿಕಮಲದಲ್ಲಿ ಗುರುಲಿಂಗವಾಗಿ ನೆಲಸಿರ್ಪರಯ್ಯ. ನಿರಹಂಕಾರಕಮಲದಲ್ಲಿ ಶಿವಲಿಂಗವಾಗಿ ನೆಲಸಿರ್ಪರಯ್ಯ. ಸುಮನಕಮಲದಲ್ಲಿ ಜಂಗಮಲಿಂಗವಾಗಿ ನೆಲಸಿರ್ಪರಯ್ಯ. ಸುಜ್ಞಾನಕಮಲದಲ್ಲಿ ಪ್ರಸಾದಲಿಂಗವಾಗಿ ನೆಲಸಿರ್ಪರಯ್ಯ. ಸದ್ಭಾವಕಮಲದಲ್ಲಿ ಮಹಾಲಿಂಗವಾಗಿ ನೆಲಸಿರ್ಪರಯ್ಯ. ನಿರುಪಾಧಿಕಕಮಲದಲ್ಲಿ ಚಿದ್ಘನಲಿಂಗವಾಗಿ ನೆಲಸಿರ್ಪರಯ್ಯ. ನಿಷ್ಪ್ರಪಂಚಕಮಲದಲ್ಲಿ ಚಿತ್ಪ್ರಾಣಲಿಂಗವಾಗಿ ನೆಲಸಿರ್ಪರಯ್ಯ. ಇಂತೀ ಸಾಕಾರವಾದ ಅಷ್ಟದಳಕಮಲದಲ್ಲಿ ಅಷ್ಟವಿಧಲಿಂಗಂಗಳಾಗಿ ನೆಲಸಿರ್ಪಾತನು ತಾನೆ ನೋಡ. ಇನ್ನು ನಿರಾಕಾರವಾದ ಅಷ್ಟದಳಕಮಲಂಗಳಲ್ಲಿ ನೆಲಸಿರ್ಪ ಲಿಂಗಂಗಳಾವಾವೆಂದಡೆ : ನಿರಾಲಂಬಕಮಲದಲ್ಲಿ ನಿಷ್ಕಳಂಕಲಿಂಗವಾಗಿ ನೆಲಸಿರ್ಪರಯ್ಯ. ನಿರಾತಂಕಕಮಲದಲ್ಲಿ ನಿಶ್ಶೂನ್ಯಲಿಂಗವಾಗಿ ನೆಲಸಿರ್ಪರಯ್ಯ. ನಿಷ್ಕಾಮಕಮಲದಲ್ಲಿ ನಿರಂಜನಲಿಂಗವಾಗಿ ನೆಲಸಿರ್ಪರಯ್ಯ. ನಿಷ್ಪ್ರಪಂಚಕಮಲದಲ್ಲಿ ನಿಷ್ಪ್ರಪಂಚಲಿಂಗವಾಗಿ ನೆಲಸಿರ್ಪರಯ್ಯ. ಸಚ್ಚಿದಾನಂದಕಮಲದಲ್ಲಿ ಸಚ್ಚಿದಾನಂದಲಿಂಗವಾಗಿ ನೆಲಸಿರ್ಪರಯ್ಯ. ನಿರ್ನಾಮಕಮಲದಲ್ಲಿ ನಿರ್ನಾಮಲಿಂಗವಾಗಿ ನೆಲಸಿರ್ಪರಯ್ಯ. ನಿರಾಳಕಮಲದಲ್ಲಿ ನಿರಾಳಲಿಂಗವಾಗಿ ನೆಲಸಿರ್ಪರಯ್ಯ. ಸುರಾಳಕಮಲದಲ್ಲಿ ಸುರಾಳಲಿಂಗವಾಗಿ ನೆಲಸಿರ್ಪರು ನೋಡ. ಇಂತು ಸಾಕಾರ-ನಿರಾಕಾರಲೀಲೆಯಿಂದ ತಿಳಿದುಪ್ಪ ಹೆರೆದುಪ್ಪದೋಪಾದಿಯಲ್ಲಿ ಷೋಡಶಕಮಲದಲ್ಲಿ ಷೋಡಶಲಿಂಗಂಗಳಾಗಿ ನೆಲಸಿರ್ಪ ಅನಾದಿ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗಪ್ರಭು ತಾನೆ ನೋಡ ಸಂಗನಬಸವೇಶ್ವರ.