Index   ವಚನ - 71    Search  
 
ಅಯ್ಯ, ಪ್ರವೃತ್ತಿಮಾರ್ಗದಲ್ಲಿ ಚರಿಸುವ ಅಧೋ ಕುಂಡಲಿ ಭೇದವೆಂತೆಂದಡೆ : ದ್ವಾದಶಮಲಂಗಳೆ ಅಂಗವಾಗಿರ್ಪುದಯ್ಯ. ಷೋಡಶಮದಂಗಳೆ ಪ್ರಾಣವಾಗಿರ್ಪುದಯ್ಯ. ಸಪ್ತವ್ಯಸನಂಗಳೆ ಸಂಗವಾಗಿರ್ಪುದಯ್ಯ. ದುರ್ಗಣಂಗಳೆ ವಸ್ತ್ರಾಭರಣವಾಗಿರ್ಪುದಯ್ಯ. ಅನಾಚಾರಂಗಳೆ ನಡೆನುಡಿಯಾಗಿರ್ಪುದಯ್ಯ. ಅಸತ್ಯವೆ ವಾಹನವಾಗಿರ್ಪುದಯ್ಯ. ಕುಂಭಾವಂಗಳೆ ಪಿತಮಾತೆಯಾಗಿರ್ಪುದಯ್ಯ. ಕುಚಿತ್ತಗಳೆ ಬಂಧುಬಳಗವಾಗಿರ್ಪುದಯ್ಯ. ಕುಬುದ್ಧಿಗಳೆ ಒಡಹುಟ್ಟಿದರಾಗಿರ್ಪುದಯ್ಯ. ದುರಹಂಕಾರಗಳೆ ನೆಂಟರಾಗಿರ್ಪುದಯ್ಯ. ಕುಮನವೆ ಸ್ತ್ರೀಯಳಾಗಿರ್ಪುದಯ್ಯ. ಅಜ್ಞಾನವೆ ಮಂದಿರವಾಗಿರ್ಪುದಯ್ಯ. ದುರ್ಭಾವವೆ ಆಹಾರವಾಗಿರ್ಪುದಯ್ಯ. ಅರಿಷಡ್ವರ್ಗವೆ ದೈವವಾಗಿರ್ಪುದಯ್ಯ. ಷಡ್ಭಾವವಿಕಾರಂಗಳೆ ಅವಯವಂಗಳಾಗಿರ್ಪುದಯ್ಯ. ಆಸೆಯೆ ಧನಧಾನ್ಯವಾಗಿರ್ಪುದಯ್ಯ. ಇಂತು ಸಂಸಾರವೆಂಬ ಪಾಶದಲ್ಲಿ ಜನ್ಮ-ಜರೆ-ಮರಣಂಗಳಿಂದ ತಿರುಗುವ ಜೀವನೆ ಅಧೋಕುಂಡಲಿಸರ್ಪನೆನಿಸುವುದಯ್ಯ. ಆ ಸರ್ಪನೆ ಮೂಲಹಂಕಾರವೆಂಬ ಪಟ್ಟಣವ ರಚಿಸಿ ಜಿಹ್ವಾಲಂಪಟ-ಗುಹ್ಯಲಂಪಟದಲ್ಲಿ ಮುಳುಮುಳುಗಿ ತೇಲುತ್ತಿರ್ಪುದು ನೋಡ ಸಂಗನಬಸವೇಶ್ವರ.